

ಮಂಡ್ಯ: ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಪೂರೈಸಿದ ಖುಷಿಗೆ ಅಭಿಮಾನಿಗಳು ಹಾಗೂ ಆಪ್ತರು ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಮಠಾಧೀಶರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್ ರೇಸ್ಗೆ ಬಿಟ್ಟಿರುವ ಕುದುರೆ ನಾನು, ದಣಿಯುವ ವರೆಗೂ ಓಡುತ್ತಲೇ ಇರುತ್ತೇನೆ ಜಾಕಿ ಓಡಿಸಿದಂತೆ ಓಡುವೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುದ್ದು, ಸಖತ್ ಟ್ರೆಂಡ್ ಆಗುತ್ತಿದೆ.
ನಾನು ಟಾಂಗಾ ಕುದುರೆ ಆಗಿದ್ದೆ. ಅಲ್ಲಿ-ಇಲ್ಲಿ ಓಡಾಡುತ್ತಿದ್ದೆ. ನನ್ನನ್ನು ನೋಡಿದ ಕೆಲವರು ಈ ಕುದುರೆ ಎತ್ತರ ಇದೆ, ಕಟ್ಟುಮಸ್ತಾಗಿದೆ ಎಂದು ರೇಸ್ ಕೋರ್ಸ್ ಗಂಧ-ಗಾಳಿ ಗೊತ್ತಿರದಿದ್ದರೂ ಅಲ್ಲಿ ತಂದು ನಿಲ್ಲಿಸಿದರು. ಆ ರೇಸ್ನಲ್ಲಿ ದೊಡ್ಡ-ದೊಡ್ಡ ಕುದುರೆಗಳು ಇದ್ದವು. ಆ ಕುದುರೆಯ ಮಾಲೀಕರು ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ರಾಮಮೂರ್ತಿ. ನನ್ನನ್ನು ಬೈಯ್ಯುವ, ನಿನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಾನು ಎಂದು ಹೇಳುವ ಅರ್ಹತೆ-ಯೋಗ್ಯತೆ ಇರುವುದು ರಾಮಮೂರ್ತಿ ಅವರಿಗೆ ಮಾತ್ರ. ಹೀಗೆ ಕರೆತಂದು ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ ಪಿ.ಎನ್. ಸತ್ಯ ಅವರನ್ನು ಕೂರಿಸಿದರು. ಅಂದಿನಿಂದ ಇಂದಿನ ವರೆಗೆ ಓಡುತ್ತಲೇ ಇದ್ದೀನಿ. ತರುಣ್, ಮಿಲನಾ ಪ್ರಕಾಶ್ ಹೀಗೆ ಜಾಕಿಗಳು ಬದಲಾಗುತ್ತಲೇ ಇದ್ದಾರೆ. ಕುದುರೆಗೆ ಓಡುವುದು ಮಾತ್ರವೇ ಗೊತ್ತು, ಅದನ್ನು ಓಡಿಸುತ್ತಿರುವವರು ಜಾಕಿಗಳು. ಸಿನಿಮಾ ನನ್ನದಲ್ಲ, ಎಲ್ಲ ನಿರ್ದೇಶಕರದ್ದು ಎಂದು ಹೇಳಿದ್ದಾರೆ.
ಚಿತ್ರರಂಗ, ರಾಜಕೀಯ, ಬ್ಯುಸಿನೆಸ್ ಯಾವುದೇ ಆಗಿರಲಿ ಶ್ರಮ ಇರಲೇ ಬೇಕು. ಶ್ರದ್ಧೆ ಬೇಕೇಬೇಕು. ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇ ಬೇಕು. ಅವಮಾನಗಳು ಆದರೇನೆ ಸನ್ಮಾನ. ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ, ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು, ಚಪ್ಪಲಿ ಬಿದ್ದಾಗ ಅದನ್ನೂ ಸ್ವೀಕರಿಸಬೇಕು. ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ. ಹೌದು ನಾನು ಬ್ಯಾಡ್ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ.
ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೇ ಮುಖ್ಯ. ತಿರುಪತಿಗೆ ಬಸ್ಸಿನಲ್ಲೆ ಹೋಗಿದ್ದೆ, ಕಾರಿನಲ್ಲಿ ಹೋಗಿದ್ದೆ. ದೇವರ ಬಳಿ ಕ್ಷಮೆ ಕೇಳುವುದಿಲ್ಲ, ತಲೆ ಇಡಬೇಡಿ, ತಲೆ ಹೊಡಿಬೇಡಿ, ಗುರಿ ಇಟ್ಟುಕೊಳ್ಳಿ, ಇನ್ನೂ ಸೊನ್ನೆಯಲ್ಲೇ ಇದ್ದೇನೆ. ಅತಿಯಾಸೆ ಕೆಲಸದ ಮೇಲೆ, ಏನೇ ಮಾಡಿ, ಒಂದಲ್ಲ ಒಂದಿನ ಜಯ ಸಿಗುತ್ತದೆ.
ಚಿತ್ರರಂಗದ ಹಿರಿಯರು ಆಶೀರ್ವಾದ ಮಾಡಿದ್ದಾರೆ. 57-58 ಸಿನಿಮಾಗಳಲ್ಲಿ ನಟಿಸಿದ್ದೀನಿ, ಆ ಸಿನಿಮಾಗಳಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದ ತಂತ್ರಜ್ಞಾನರು, ನಟಿಯರು ಆಗಿರಬಹುದು, ಗೊತ್ತೊ-ಗೊತ್ತಿಲ್ಲದೆ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದು ನಟ ದರ್ಶನ್ ಬೆಳ್ಳಿ ಪರ್ವ ಡಿ-25ನಲ್ಲಿ ತಮ್ಮದೇ ಶೈಲಿಯಲ್ಲಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.