ನಾಯಕತ್ವ ಬಿಕ್ಕಟ್ಟು; ಕಾಂಗ್ರೆಸ್​ಗೆ​ 'ಗುಡ್​ ಬೈ' ಹೇಳಲಿದ್ದಾರಾ ಮಾಜಿ ಸಿಎಂ ಕಮಲ್​ನಾಥ್​

kamalnath
Published on

ಭೋಪಾಲ್​: ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್​ಗೆ ಯಾಕೋ ಎಲ್ಲಾ ಅಂದುಕೊಂಡಂತೆ ಆಗಿ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಹಿರಿಯ ನಾಯಕರು ಪಕ್ಷಕ್ಕೆ ಗುಡ್​ ಬೈ ಹೇಳುತ್ತಿದ್ದು, ಇದೀಗ ಮತ್ತೊಬ್ಬ ಹಿರಿಯ ನಾಯಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್​ ನಾಯಕತ್ವದ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಹಾಗೂ ಅವರ ಪುತ್ರ ಛಿಂದ್ವಾರ ಕ್ಷೇತ್ರದ ಸಂಸದ ನಕುಲ್​ನಾಥ್​ ಅವರು ತಮ್ಮ ಎಕ್ಸ್ ಬಯೋದಿಂದ ಕಾಂಗ್ರೆಸ್ ಅನ್ನು ತೆಗೆದುಹಾಕಿರುವುದು ಇವರ ಬಿಜೆಪಿ ಸೇರ್ಪಡೆ ವದಂತಿ ಕುರಿತು ಮತ್ತಷ್ಟು ಪುಷ್ಠಿ ನೀಡಿದೆ.

ಈಗಾಗಲೇ ಮಧ್ಯಪ್ರದೇಶದ ಛಿಂದ್ವಾರ ಕ್ಷೇತ್ರದ ಮತದಾರರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಕಮಲ್​ನಾಥ್ ಹಾಗೂ ಅವರ ಪುತ್ರನಿಗೆ​ ಬಿಜೆಪಿ ಸೇರುವುದು ಸೂಕ್ತ ಎಂದು ಅಲ್ಲಿನ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಲ್ಲದೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಕಮಲ್​ನಾಥ್​ ಅವರನ್ನು ಮೂಲೆಗುಂಪು ಮಾಡಲಾಗಿದ್ದು, ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ದೆಹಲಿಯಲ್ಲಿರುವ ಕಮಲ್​ನಾಥ್​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಕಮಲ್​ನಾಥ್​ ಪಕ್ಷ ತ್ಯಜಿಸಿದ್ದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ದೊಡ್ಡ ಹೊಡೆತ ಬೀಳಲಿದ್ದು, ಇದನ್ನು ನಾಯಕರು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net