ಟೆಸ್ಟ್​ ಕ್ರಿಕೆಟ್​ನಲ್ಲಿ ಡಬಲ್​ ಸೆಂಚುರಿ ಬಾರಿಸಿದ ರವೀಂದ್ರ ಜಡೇಜಾ

Ravindra Jadeja
Published on

ರಾಜ್​ಕೋಟ್​: ಇಲ್ಲಿನ ನಿರಂಜನ್​ ಷಾ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. ಆರ್​. ಅಶ್ವಿನ್​ ಬಳಿಕ ಟೀಂ ಇಂಡಿಯಾ ಪರ ಆಲ್ರೌಂಡರ್​ ರವೀಂದ್ರ ಜಡೇಜಾ ಹೊಸ ದಾಖಲೆ ಒಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಂಗ್ಲೆಂಡ್​ ತಂಡದ ಮೊದಲ ಇನ್ನಿಂಗ್ಸ್​ನಲ್ಲಿ ನಾಯಕ ಬೆನ್ ಸ್ಟೋಕ್ಸ್ ಮತ್ತು ಟಾಮ್ ಹಾರ್ಟ್ಲಿ ವಿಕೆಟ್​ ಪಡೆಯುವ ಮೂಲಕ ರವೀಂದ್ರ ಜಡೇಜಾ ಭಾರತದ ನೆಲದಲ್ಲಿ ತಮ್ಮ 200ನೇ ಟೆಸ್ಟ್​ ವಿಕೆಟ್​ ಪಡೆದಿದ್ದಾರೆ. ಈ ಮೂಲಕ ಭಾರತದ ನೆಲದಲ್ಲಿ 200 ಟೆಸ್ಟ್ ವಿಕೆಟ್‌ ಹಾಗೂ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಪಡೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಡೇಜಾಗೂ ಮೊದಲು ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್ ಮತ್ತು ಕಪಿಲ್ ದೇವ್ ಈ ಸಾಧನೆ ಮಾಡಿದ್ದರು. ಇದೀಗ ಈ ದಿಗ್ಗಜ ಆಟಗಾರರ ಕ್ಲಬ್​ಗೆ ಜಡೇಜಾ ಸೇರಿಕೊಂಡಿದ್ದಾರೆ. ಭಾರತದ ನೆಲದಲ್ಲಿ ಅನಿಲ್ ಕುಂಬ್ಳೆ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ (350) ಪಡೆದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಆರ್​. ಅಶ್ವಿನ್​ (347) ಇದ್ದಾರೆ.

Ravindra Ashwin

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಹರ್ಭಜನ್ ಸಿಂಗ್ 265 ವಿಕೆಟ್ ಪಡೆದಿದ್ದರೆ, 219 ವಿಕೆಟ್​ಗಳೊಂದಿಗೆ 1983 ವಿಶ್ವಕಪ್ ಹೀರೋ ಕಪಿಲ್ ದೇವ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದೀಗ ಈ ಪಟ್ಟಿಗೆ ಸೇರ್ಪಡೆಗೊಂಡಿರುವ ರವೀಂದ್ರ ಜಡೇಜಾ 201 ವಿಕೆಟ್​ ಉರುಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲೂ ಮ್ಯಾಜಿಕ್ ಮಾಡಿರುವ ಜಡೇಜಾ ಈ ಪಂದ್ಯದಲ್ಲಿ 112 ರನ್‌ಗಳ ಇನಿಂಗ್ಸ್‌ ಸಹ ಆಡಿದ್ದರು.

2012ರಲ್ಲಿ ಭಾರತ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಜಡೇಜಾ ಅಂದಿನಿಂದ ಟೀಮ್ ಇಂಡಿಯಾ ಪರ 70 ಟೆಸ್ಟ್ ಪಂದ್ಯಗಳಲ್ಲಿ 3005 ರನ್ ಗಳಿಸಿದ್ದಾರೆ ಮತ್ತು 282 ವಿಕೆಟ್​ಗಳನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net