ಕಸಾಪಗೆ ಹೊಸ ರೂಪ: ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಮಹೇಶ್​ ಜೋಶಿ ಮನದಾಳ

Joshi 1
ಕಸಾಪ ಅಧ್ಯಕ್ಷ ಚುನಾವಣೆಯಲ್ಲಿ ಭಾರಿ ಮುನ್ನಡೆ ಸಾಧಿಸಿರುವ ನಾಡೋಜ ಮಹೇಶ್ ಜೋಶಿ ಸೋಮವಾರ ವಿಜಯವಾಣಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.
Published on
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನುವ ಹೆಸರಿಗೆ ತಕ್ಕಂತೆ ಕನಿಷ್ಠ 1 ಕೋಟಿ ಸದಸ್ಯರನ್ನಾಗಿಸುವುದರ ಜತೆಗೆ ಮುಂದಿನ ಚುನಾವಣೆಯನ್ನು ಸಂಪೂರ್ಣ ಡಿಜಿಟಲ್ ವೇದಿಕೆ ಮೂಲಕ ನಡೆಸುವ ಮಹತ್ವಾಕಾಂಕ್ಷೆಯನ್ನು ನಾಡೋಜ ಡಾ.ಮಹೇಶ್ ಜೋಶಿ ವ್ಯಕ್ತಪಡಿಸಿದ್ದಾರೆ. ಕಸಾಪ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನತ್ತ ದಾಪುಗಾಲಿಟ್ಟಿರುವ ಅವರು ಸೋಮವಾರ ವಿಜಯವಾಣಿ ಕಚೇರಿಗೆ ಭೇಟಿ ನೀಡಿದಾಗ ನಡೆಸಿದ ಸಂವಾದದಲ್ಲಿ ತಮ್ಮ ಭವಿಷ್ಯದ ಯೋಜನೆ, ಯೋಚನೆಗಳನ್ನು ತೆರೆದಿಟ್ಟಿದ್ದಾರೆ.

ಜನ ಸಾಮಾನ್ಯರ ಪರಿಷತ್

ಈ ಚುನಾವಣೆಯಲ್ಲಿ ಕೆಲವರು ಜಾತಿ, ಕೆಲವರು ಪ್ರದೇಶ, ಲಿಂಗದ ಆಧಾರದಲ್ಲಿ ಮತ ಕೋರಿದರು. ಕೆಲವರು ಆಸೆ, ಆಮಿಷ, ಉಡುಗೊರೆ ನೀಡಿದರೆ ಕೆಲವರು ನನ್ನ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿ ಮತದಾರರನ್ನು ದಾರಿತಪ್ಪಿಸಲು ನೋಡಿದರು. ಆದರೆ ನಾನು ಯಾವ ಜಾತಿ, ಮತ, ಪಂಥ, ಪ್ರದೇಶಕ್ಕೂ ಸೀಮಿತನಲ್ಲ. ಅಖಂಡ ಕರ್ನಾಟಕದವನು ಎಂದು ಪ್ರಚಾರ ಮಾಡಿದೆ. ಕಸಾಪ ಪ್ರಬುದ್ಧ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ, ಅದಕ್ಕಾಗಿ ಚಿರಋಣಿಯಾಗಿರುವೆ. ದೂರದರ್ಶನದ ಅಧಿಕಾರಿಯಾಗಿದ್ದಾಗ, ಜನಸಾಮಾನ್ಯರ ಬಳಿಗೆ ದೂರದರ್ಶನವನ್ನು ಕೊಂಡ್ಯೊಯುವ ಕೆಲಸ ಮಾಡಿದೆ. ಕರ್ನಾಟಕದಲ್ಲಿ 7 ಕೋಟಿ ಜನರಿದ್ದರೂ ಕೇವಲ 3.4 ಲಕ್ಷ ಸದಸ್ಯರಿದ್ದಾರೆ. ಈ ಸಂಖ್ಯೆಯನ್ನು ಕನಿಷ್ಠ 1 ಕೋಟಿಗೆ ಒಯ್ಯುತ್ತೇನೆ. ನಿವೃತ್ತ ಸೈನಿಕರು, ಸೇವಾನಿರತ ಸೈನಿಕರಿಗೆ, ಅಂಗವಿಕಲರಿಗೆ ಉಚಿತವಾಗಿ, ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ವಿಧಿಸಿ ಸದಸ್ಯತ್ವ ಮಾಡಿಸಲಾಗುತ್ತದೆ. ರಾಜ್ಯದ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಸಂಚರಿಸಿ ಸದಸ್ಯರನ್ನಾಗಿಸಲಾಗುತ್ತದೆ. ಪರಿಷತ್ತನ್ನು ಜನ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗಲು ಕೆಲಸ ಮಾಡುವೆ. ಕಸಾಪ ಮುಂಭಾಗದ ಮಕ್ಕಳ ಕೂಟ ಮೈದಾನದಲ್ಲಿ ಅಧಿಕಾರ ಸ್ವೀಕರಿಸುತ್ತೇನೆ.

ಮುಂದಿನ ಚುನಾವಣೆಗೆ ಡಿಜಿಟಲ್ ಮತದಾನ

ಒಂದು ಕೋಟಿ ಸದಸ್ಯತ್ವ ಮಾಡಿದರೆ ಚುನಾವಣೆ ವೆಚ್ಚ ಅಗಾಧವಾಗುತ್ತದೆ ಎನ್ನುವ ಆತಂಕ ಅನೇಕರಲ್ಲಿದೆ. ಅದಕ್ಕೆ ಅವಕಾಶವಿಲ್ಲದಂತೆ, ಕಸಾಪದ ಎಲ್ಲ ಮಾಹಿತಿ, ಕಾರ್ಯಗಳಿಗೆ ವಿಶೇಷ ಆಪ್ ರೂಪಿಸಲಾಗುತ್ತದೆ. ಕಸಾಪದ ಎಲ್ಲ ಲೆಕ್ಕಪತ್ರಗಳು, ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳ ಜತೆಗೆ ಮತದಾನಕ್ಕೂ ಅವಕಾಶ ಇರಲಿದೆ. ಆಧಾರ್ ಸಂಖ್ಯೆಗೆ ಜೋಡಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ, ಮತದಾರರು ತಾವಿರುವ ಸ್ಥಳದಿಂದಲೇ ಮತ ಚಲಾವಣೆ ಮಾಡಬಹುದು. ಮತಕೇಂದ್ರ ಸ್ಥಾಪನೆ, ಪೊಲೀಸ್, ಸಿಬ್ಬಂದಿ ನಿಯೋಜನೆಯಂತಹ ಯಾವುದೇ ಖರ್ಚು ಇಲ್ಲದೆ ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಯುತ್ತದೆ. ಇದಕ್ಕಾಗಿ ಸುದೀರ್ಘ ಚರ್ಚೆ ನಂತರ ಬೈಲಾ ತಿದ್ದುಪಡಿ ಮಾಡಲಾಗುತ್ತದೆ.

ಹಾರ ತುರಾಯಿ ಬೇಡ: ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಮನತುಂಬಿ ಎಲ್ಲರೂ ಹಾರೈಸಬಹುದು. ಆದರೆ ಈ ವೇಳೆ ಹಾರ, ತುರಾಯಿ, ಶಾಲು, ಹೂಗುಚ್ಛಗಳನ್ನು ಸ್ವೀಕರಿಸುವುದಿಲ್ಲ ಎಂದು ವಿನಮ್ರವಾಗಿ ತಿಳಿಸುತ್ತೇನೆ. ಹಾಗೊಂದು ವೇಳೆ ನೀಡಲೇಬೇಕೆಂದಿದ್ದರೆ ಸಣ್ಣ ಗಾತ್ರದ ಕನ್ನಡ ಪುಸ್ತಕಗಳನ್ನು ನೀಡಲು ಅಡ್ಡಿಯಿಲ್ಲ ಎಂದು ಮಹೇಶ್ ಜೋಶಿ ಮನವಿ ಮಾಡಿದರು.

ಬಿಜೆಪಿಯವರು ಮಾತ್ರವಲ್ಲ..: ನನ್ನ ಪರವಾಗಿ ಬಿಜೆಪಿ ಪ್ರಚಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಪಕ್ಷವಲ್ಲ, ಬಿಜೆಪಿಯಲ್ಲಿರುವ ಕೆಲ ಕನ್ನಡಿಗರು, ಕಸಾಪ ಮತದಾರರು ಬೆಂಬಲಿಸಿದ್ದಾರೆ ಎಂದು ತಿದ್ದುಪಡಿ ಮಾಡಿಕೊಳ್ಳಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ, ಸಮಾಜದ ಎಲ್ಲರಿಂದ ಬೆಂಬಲ ಕೋರಿದ್ದೇನೆ. ಅದರಲ್ಲಿ ಬಿಜೆಪಿಯವರೂ ಇದ್ದಾರೆ. ನಿವೃತ್ತ ನ್ಯಾ. ಅರಳಿ ನಾಗರಾಜ್ ಬೆಂಬಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ರ ಬರೆದು ಬೆಂಬಲಿಸಿದ್ದಾರೆ. ಕಾಂಗ್ರೆಸ್​ನ ಡಿ.ಆರ್.ಪಾಟೀಲ್, ಎಚ್.ಕೆ.ಪಾಟೀಲ್ ಬೆಂಬಲಿಸಿದ್ದಾರೆ. ಕಮ್ಯುನಿಸ್ಟ್ ಮುಖಂಡ ಗೋಪಾಲಗೌಡರೂ ಬೆಂಬಲ ನೀಡಿದ್ದಾರೆ. ಅನವಶ್ಯಕ ವಾಗಿ ಒಂದೇ ಪಕ್ಷವನ್ನು ಎಳೆದುತರುವುದು ಬೇಡ.

ಪ್ರಮುಖ ಯೋಜನೆ

  • ಕನ್ನಡ ಅಂಕಿ ಬಳಸಲು ಉತ್ತೇಜನ
  • ಕಸಾಪ ಧ್ವಜವನ್ನೇ ಕನ್ನಡ ಧ್ವಜವಾಗಿಸುವ ಕುರಿತು ಪರಿಶೀಲನೆ
  • 1 ಕೋಟಿ ಸದಸ್ಯರಿಂದ ಸಂಗ್ರಹವಾಗುವ 250 ಕೋಟಿ ರೂ. ಶುಲ್ಕ ಶಾಶ್ವತ ಠೇವಣಿ
  • ಪುಸ್ತಕ ಮಾರಾಟಕ್ಕೆ ಆನ್​ಲೈನ್ ವ್ಯವಸ್ಥೆ
  • ಕಾವ, ಜಾಣ ಪರೀಕ್ಷೆ ಮೌಲ್ಯವರ್ಧನೆ
  • ಹಾವೇರಿ ಸಮ್ಮೇಳನ ವಿಶೇಷ

ಈಗಾಗಲೆ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಶಿಶುನಾಳ ಷರೀಷರ, ಪಂಚಾಕ್ಷರಿ ಗವಾಯಿಗಳ, ಕನಕದಾಸರ, ಸರ್ವಜ್ಞರ ನಾಡು ಇದು. ಈ ಗಣ್ಯಮಾನ್ಯರ ವಿಚಾರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ವಿಕಸನಗೊಂಡಿರುವ ವೈದ್ಯಕೀಯ ಸಾಹಿತ್ಯ, ಕಾನೂನು ಸಾಹಿತ್ಯ, ಯಕ್ಷಗಾನ ಸಾಹಿತ್ಯ, ಕ್ರೀಡಾ ಸಾಹಿತ್ಯದಂತಹ ಕ್ಷೇತ್ರಗಳನ್ನು ಒಳಗೊಳ್ಳಲಾಗುತ್ತದೆ. ನಿವೃತ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳ ಅನುಷ್ಠಾನವನ್ನು ಖಾತ್ರಿ ಮಾಡಲಾಗುತ್ತದೆ.

ಸುಳ್ಳು ಸುದ್ದಿಗಳನ್ನು ಹಬ್ಬಿಸಿದವರಿಗೆ ಶಾಸ್ತಿ: ಚುನಾವಣೆ ವೇಳೆ ಅನೇಕರು ಸುಳ್ಳು ಹಬ್ಬಿಸಿದರು. ನನಗೆ ಕರೊನಾ ಸೋಂಕು ತೀವ್ರವಾಗಿ ಓಡಾಡಲು ಸಾಧ್ಯವಿಲ್ಲ ಎಂದರು. ನಾಡೋಜ ಪದನಾಮ ಬಳಸುವಂತಿಲ್ಲ ಎಂದರು. ಈ ಸುಳ್ಳುಗಳನ್ನು ಹಬ್ಬಿಸಿದವರ ಮಾಹಿತಿ ಸಿಕ್ಕಿದೆ. ಅವರ ಹೆಸರನ್ನು ಸದ್ಯದಲ್ಲೆ ಘೋಷಿಸುತ್ತೇನೆ ಹಾಗೂ 10 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಆ ಹಣವನ್ನು ಕಸಾಪ ಕಾರ್ಯಕ್ಕೆ ಬಳಸಲು ನಿರ್ಧರಿಸಿದ್ದೇನೆ.

ಒಂದೇ ಬಾರಿ ಅಧಿಕಾರ: ಈಗಿನ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುತ್ತದೆ. ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಸತತ 2ನೇ ಬಾರಿಗೆ ಸ್ಪರ್ಧಿಸಬಾರದು ಎಂಬ ನಿಬಂಧನೆ ಇದೆ. ಆದರೆ ನಡುವೆ ಒಂದು ಅವಧಿ ಬಿಡುವು ನೀಡಿ ಸ್ಪರ್ಧಿಸಬಹುದು. ಜಿಲ್ಲಾ, ತಾಲೂಕು ಮಟ್ಟದಲ್ಲಿ ಅಧ್ಯಕ್ಷ, ಪದಾಧಿಕಾರಿಗಳಾಗಲು ನಿರ್ಬಂಧ ಇಲ್ಲ. ಬೈಲಾದಲ್ಲಿ ಬದಲಾವಣೆ ತರಲಾಗುತ್ತದೆ. ಕೇಂದ್ರದಿಂದ ತಾಲೂಕು ಮಟ್ಟದವರೆಗೆ ಒಮ್ಮೆ ಮಾತ್ರ ಅಧ್ಯಕ್ಷರಾಗಬಹುದು. ಈ ಬಾರಿ ತಾಲೂಕು ಮಟ್ಟದಲ್ಲಿ ಜಯಿಸಿದವರು ಮುಂದೆ ಬೇಕಿದ್ದರೆ ಜಿಲ್ಲೆ, ಕೇಂದ್ರಕ್ಕೆ ಸ್ಪರ್ಧಿಸಬಹುದು. ಆದರೆ ಅದೇ ಅಥವಾ ಬೇರೆ ತಾಲೂಕಿನಲ್ಲೂ ಮತ್ತೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಹೊಸ ಮುಖಗಳನ್ನು ಕಸಾಪ ವ್ಯಾಪ್ತಿಗೆ ತರಲಾಗುವುದು.

ಜೋಶಿ ದಾಖಲೆಯ ಗೆಲುವು

ಶತಮಾನದ ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲೇ ಇಲ್ಲಿಯವರೆಗೆ ಅತಿ ಹೆಚ್ಚಿನ ಮತಗಳ ಅಂತರದ ಗೆಲುವನ್ನು ನಾಡೋಜ ಡಾ.ಮಹೇಶ್ ಜೋಶಿ ದಾಖಲಿಸಿದ್ದಾರೆ. ಕಸಾಪ 26ನೇ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ, ಸದ್ಯ ದೊರಕಿರುವ ಅಂಕಿ-ಅಂಶಗಳಂತೆ ಎರಡನೇ ಸ್ಥಾನದಲ್ಲಿರುವ ಡಾ.ಶೇಖರಗೌಡ ಮಾಲಿಪಾಟೀಲ ಅವರಿಗಿಂತ 46,168 ಅಧಿಕ ಮತಗಳನ್ನು ಪಡೆದಿದ್ದಾರೆ. ಅಂಚೆ ಮತಗಳ ಎಣಿಕೆ ಬುಧವಾರ ನಡೆಯಲಿದ್ದು, ಈ ಅಂತರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. 2016ರ ಚುನಾವಣೆಯಲ್ಲಿ ನಾಡೋಜ ಡಾ.ಮನು ಬಳಿಗಾರ್ ಅವರು ಅಭೂತಪೂರ್ವ 38,550 ಮತಗಳ ಅಂತರದಲ್ಲಿ ಜಯಿಸಿದ್ದರು. ಬಳಿಗಾರ್ ಒಟ್ಟು 61,535 ಮತ ಪಡೆದಿದ್ದರು. ಇದೀಗ ಜೋಶಿ ಇಲ್ಲಿವರೆಗೆ 68,525 ಮತಗಳನ್ನು ಪಡೆದಿದ್ದು, ಮಾಲಿಪಾಟೀಲ 22,357 ಮತ ಗಳಿಸಿದ್ದಾರೆ.

ಐದನೇ ನಾಡೋಜ!: ಹಂಪಿ ಕನ್ನಡ ವಿವಿ ಪ್ರದಾನ ಮಾಡುವ ಪ್ರತಿಷ್ಠಿತ ‘ನಾಡೋಜ’ ಗೌರವಕ್ಕೆ ಪಾತ್ರರಾದವರ ಪೈಕಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುತ್ತಿದ್ದಾರೆ ಐದನೆಯವರು ಮಹೇಶ್. ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್ ಸಹ ನಾಡೋಜ ಗೌರವ ಪಡೆದವರು. ಅವರಿಗೂ ಮುನ್ನ ಅಧ್ಯಕ್ಷರಾಗಿದ್ದ ಜಿ.ನಾರಾಯಣ, ಪ್ರೊ.ಜಿ.ವೆಂಕಟಸುಬ್ಬಯ್ಯ, ಹಂ.ಪ.ನಾಗರಾಯಯ್ಯ ಅವರೂ ನಾಡೋಜ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ನಾಡೋಜ ಗೌರವ ಪ್ರದಾನ ಮಾಡುವ ಮೊದಲೇ ಇವರುಗಳು ಕಸಾಪ ಅಧ್ಯಕ್ಷರಾಗಿದ್ದರು ಎನ್ನುವುದಷ್ಟೇ ವ್ಯತ್ಯಾಸ.

ನಾಳೆ ಅಧಿಕೃತ ಘೋಷಣೆ: ಈಗಾಗಲೆ ಎಲ್ಲ ಜಿಲ್ಲೆಗಳಲ್ಲೂ ಅಧ್ಯಕ್ಷರ ಆಯ್ಕೆ ಘೋಷಣೆ ಮಾಡಲಾಗಿದೆ. ಕೇಂದ್ರ ಅಧ್ಯಕ್ಷರ ಆಯ್ಕೆಗೆ ಮತದಾರರು ಚಲಾಯಿಸಿದ ಮತಗಳ ಎಣಿಕೆ ಲೆಕ್ಕಾಚಾರ ಬಂದಿದೆಯಾದರೂ, ಅಂಚೆ ಮತಗಳ ಎಣಿಕೆ ಆಗಬೇಕಿದೆ. ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಹೊರರಾಜ್ಯಗಳ ಒಟ್ಟು 4,479 ಅಂಚೆ ಮತದಾರರಿದ್ದು, ಇವರಲ್ಲಿ ಸುಮಾರು 1,300ಕ್ಕೂ ಹೆಚ್ಚು ಮತಪತ್ರಗಳು, ವಿಳಾಸ ಮತ್ತಿತರ ಸಮಸ್ಯೆ ಕಾರಣಕ್ಕೆ ವಾಪಸಾಗಿವೆ. ಮಂಗಳವಾರದವರೆಗೆ ಲಭಿಸುವ ಮತಪತ್ರಗಳನ್ನು ಬುಧವಾರ ಎಣಿಕೆ ಮಾಡಿ ಅಂತಿಮ ಮತಗಳು ಹಾಗೂ ಅಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು.

ತಾಲೂಕು ಅಧ್ಯಕ್ಷರಿಗೂ ಚುನಾವಣೆ: ಸದ್ಯ ತಾಲೂಕು ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವ ಪದ್ಧತಿ ಇದೆ. ಹಾಗಾಗಿ ಕಸಾಪ ಬೈಲಾದಲ್ಲಿ ಬದಲಾವಣೆ ತಂದು ತಾಲೂಕು ಅಧ್ಯಕ್ಷರನ್ನೂ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ನಾಡೋಜ ಮಹೇಶ್ ಜೋಶಿ ಹೇಳಿದರು.

ಅಚ್ಚರಿ ಮೂಡಿಸಿದ ಸರಸ್ವತಿ ಚಿಮ್ಮಲಗಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯೊಬ್ಬರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಬೇಕೆಂಬ ಮಾತು ಅನೇಕ ವರ್ಷಗಳಿಂದ ಚಾಲ್ತಿಯಲ್ಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಇದನ್ನು ಸಾಧಿಸಬೇಕೆಂಬ ವಾದವೂ ಇದೆ. ಇದೆಲ್ಲವನ್ನೂ ಮೀರಿ ಪ್ರೊ. ಸರಸ್ವತಿ ಶಿವಪ್ಪ ಚಿಮ್ಮಲಗಿ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿ, 6,471 ಮತಗಳನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net