

ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳಲ್ಲಿ ಹಾಗೂ ಕೋ-ಆಪರೇಟಿವ್ ಸೊಸೈಟಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಸದಸ್ಯರು ಚುನಾವಣೆ ಕಿರಿಕಿರಿ ಅನುಭವಿಸುವಂತಾಗಿದೆ.
ನಿರ್ದಿಷ್ಟ ಪಕ್ಷ, ವ್ಯಕ್ತಿಪರವಾಗಿ ಪ್ರಚಾರ ಹಾಗೂ ಮತದಾನ ಮಾಡುವಂತೆ ಆಯಾ ಸೊಸೈಟಿಗಳ ಆಡಳಿತ ಮಂಡಳಿಯವರು ತಮ್ಮ ಸಿಬ್ಬಂದಿಗೆ ಹಾಗೂ ಸದಸ್ಯರಿಗೆ ಒತ್ತಡ ಹಾಕುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆಡಳಿತ ಮಂಡಳಿಗಳ ಒತ್ತಡಕ್ಕೆ ಬೇಸತ್ತು ಕೆಲವರು ಒಲ್ಲದ ಮನಸ್ಸಿನಿಂದ ಪ್ರಚಾರಕ್ಕೆ ತೆರಳುವಂತಾಗಿದೆ. ಇನ್ನೂ ಕೆಲವರು ನಿಯಮಬಾಹಿರವಾಗಿ ತಮಗೆ ಬೇಕಾದ ರಾಜಕೀಯ ಅಭ್ಯರ್ಥಿಗಳ ಪರವಾಗಿ ಚುನಾವಣೆ ಕಾರ್ಯಗಳಿಗೆ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.
ರಾಜ್ಯದಲ್ಲಿ ವಿವಿಧ ಬಗೆಯ ಕೋ-ಆಪರೇಟಿವ್ ಸೊಸೈಟಿ ಮತ್ತು ಸಹಕಾರ ಸಂಘಗಳು ಸೇರಿ 45,088 ಸೊಸೈಟಿಗಳಿವೆ. ಇದರಲ್ಲಿ ಲಕ್ಷಾಂತರ ಸದಸ್ಯರು ಇದ್ದರೆ, ಸಾವಿರಾರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ.75 ಸೊಸೈಟಿಗಳಲ್ಲಿ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ರಾಜಕೀಯ ಹಿನ್ನೆಲೆ ಹೊಂದಿರುವವರು ಹೆಚ್ಚು ಇದ್ದಾರೆ. ಆಯಾ ಸೊಸೈಟಿಗಳಲ್ಲಿರುವ ಆಡಳಿತ ಮಂಡಳಿಯಲ್ಲಿ ಇರುವ ಸದಸ್ಯರು ಹಾಗೂ ಈಗ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ರಕ್ತ ಸಂಬಂಧಿಗಳಾಗಿದ್ದಾರೆ. ಹಾಗಾಗಿ, ಆಡಳಿತ ಮಂಡಳಿ ಮೂಲಕ ಅಭ್ಯರ್ಥಿಗಳು, ಮತದಾರರನ್ನು ಸೆಳೆಯಲು ವಿವಿಧ ಕಸರತ್ತು ನಡೆಸುತ್ತಿದ್ದಾರೆ.
15 ಬಹುರಾಜ್ಯ ಮಟ್ಟದ ಸಹಕಾರ ಸಂಘ, 44 ಸಹಕಾರ ಮಹಾಮಂಡಳ, 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 25 ಲ್ಯಾಂಪ್ಸ್ ಸಹಕಾರ ಬ್ಯಾಂಕ್, 180 ಗ್ರಾಮೀಣ ಬ್ಯಾಂಕ್, 5,844 ಕೃಷಿ ಪತ್ತಿನ ಸಹಕಾರ ಬ್ಯಾಂಕ್, 43 ರೇಷ್ಮೆ ಬೆಳಗಾರರ ಬ್ಯಾಂಕ್, 105 ಸಹಕಾರ ಗ್ರೇನ್ ಬ್ಯಾಂಕ್, 3,554 ಪತ್ತಿನ ಸಹಕಾರ ಬ್ಯಾಂಕ್, 37 ಸಹಕಾರ ಸಕ್ಕರೆ ಕಾರ್ಖಾನೆ ಸೇರಿ ವಿವಿಧ ಬಗೆಯ 50 ಸೊಸೈಟಿಗಳು ಹಾಗೂ ಸಂಘಗಳಿವೆ. ಈ ಮೇಲಿನ ಎಲ್ಲ ಸಹಕಾರ ಸಂಘ ಹಾಗೂ ಸೊಸೈಟಿಗಳಲ್ಲಿ ರಾಜಕೀಯ ಹಿನ್ನೆಲೆ ಹೊಂದಿರುವ ಆಡಳಿತ ಮಂಡಳಿ ಸದಸ್ಯರು ಇದ್ದಾರೆ. ಹೀಗಾಗಿ, ತಾವು ಹೇಳಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಕೆಲ ಆಡಳಿತ ಮಂಡಳಿಗಳು ಸದಸ್ಯರಿಗೆ ತಾಕೀತು ಮಾಡುತ್ತಿರುವುದು ಕಂಡುಬಂದಿದೆ.