ಕೇರಳದ ಮೂರು ಪ್ರಸ್ತಾವ ಕರ್ನಾಟಕದಿಂದ ತಿರಸ್ಕಾರ; ಸಿಎಂ ಬೊಮ್ಮಾಯಿ ಹೇಳಿದ್ದೇನು?

New Project (1)
Published on

ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಭೇಟಿ ವೇಳೆ ಪ್ರಸ್ತಾಪಿಸಿದ ಮೂರು ಯೋಜನೆಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಿಣರಾಯ್ ವಿಜಯನ್ ಭಾನುವಾರ ಭೇಟಿಯಾಗಿ ಚರ್ಚಿಸಿದ ನಂತರ ಸಿಎಂ ಬೊಮ್ಮಾಯಿ‌ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, 2-3 ವಿಚಾರಗಳನ್ನು ಮುಂದಿಟ್ಟು ಚರ್ಚಿಸಿದರು.

ಕನ್ಯೂಯೂರು ರೈಲ್ವೆ ಮಾರ್ಗದಲ್ಲಿ 45‌ ಕಿ.ಮೀ. ನಷ್ಟು ಸುಳ್ಯ ವ್ಯಾಪ್ತಿಗೆ ಬರುತ್ತದೆ. ಪರಿಸರ ಸೂಕ್ಷ್ಮ ವಲಯದಲ್ಲಿದೆ ಎಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ತಿರಸ್ಕರಿಸಿದೆ.

ಮೈಸೂರು ರೈಲ್ವೆ ಮಾರ್ಗ, ಸುರಂಗದ ಮೂಲಕ ರೈಲ್ವೆ ಮಾರ್ಗಗಳ ಪ್ರಸ್ತಾವನೆ ಮುಂದಿಟ್ಟರು. ಆದರೆ ಬಂಡೀಪುರ ಪರಿಸರ ಸೂಕ್ಷ್ಮ ವಲಯ, ಅರಣ್ಯ ಸಂಪತ್ತು ನಾಶವಾಗಲಿದೆ ಎಂದು ತಿರಸ್ಕರಿಸಲಾಗಿದೆ.

ನಾಗರಹೊಳೆ ಅಭಯಾರಣ್ಯ ಹೆದ್ದಾರಿಯಲ್ಲಿ ರಾತ್ರಿ‌ ವೇಳೆ ಎರಡರ ಬದಲು ನಾಲ್ಕು ಬಸ್​​​ಗಳ ಸಂಚಾರಕ್ಕೆ ಅವಕಾಶ ಕೊಡಿ ಎಂದರು. ಪರಿಸರ ಸೂಕ್ಷ್ಮ ವಲಯದಲ್ಲಿರುವ ಕಾರಣ ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕಾಯಿತು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಷಡ್ಯಂತ್ರದ ಫಲಕ

ತೆಲಂಗಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದ ವೇಳೆ ಹೆದ್ದಾರಿ ಪಕ್ಕ 40% ಸಿಎಂ ಗೆ ಸ್ವಾಗತವೆಂಬ ಫಲಕ ಪ್ರದರ್ಶಿಸಿದ್ದರ ಹಿಂದೆ‌ ವ್ಯವಸ್ಥಿತ‌ ಷಡ್ಯಂತ್ರವಿದೆ ಎಂದು ಕಿಡಿಕಾರಿದರು.

ಈ ರೀತಿ ಬ್ಯಾನರ್ ಹಾಕಿರುವುದು ಬೇಸರ ತಂದಿದೆ. ಈ ಕೃತ್ಯದ‌ ಹಿಂದೆ‌ ಯಾರ ಕೈವಾಡವಿದೆ. ಹಾಕಿದವರು ಯಾರು ಎಂದು ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ.

ತೆಲಂಗಾಣದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದು ಕರ್ನಾಟಕದಲ್ಲಿ ಇದೇ ರೀತಿ ಬೋರ್ಡ್ ಹಾಕಿದರೆ ಎಷ್ಟು ಸಮಂಜಸ. ಎರಡು ರಾಜ್ಯಗಳ ಸಂಬಂಧಗಳನ್ನು ಹಾಳು ಮಾಡುತ್ತದೆ. ಈ ತರಹದ ಬೆಳವಣಿಗೆ ಸರಿಯಲ್ಲವೆಂದು‌ ಸಿಎಂ ಬೊಮ್ಮಾಯಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net