

ಮಂಗಳೂರು: ನಮೀಬಿಯಾದಿಂದ ಕರೆತಂದ 8 ಚೀತಾಗಳನ್ನು ತಮ್ಮ 72ನೇ ಹುಟ್ಟು ಹಬ್ಬದಂದು (ಸೆ.17) ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಶುವೈದ್ಯ ಸುನತ್ ಭಟ್ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾಗಳ ವೈದ್ಯಕೀಯ ತಂಡದ ಭಾಗವಾಗಿದ್ದಾರೆ.
ನವದೆಹಲಿಯ ನ್ಯಾಷನಲ್ ಜಿಯಾಲಜಿಕಲ್ ಪಾರ್ಕ್ನಲ್ಲಿ ಸಹಾಯಕ ಪಶು ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುನತ್ ಭಟ್ ಸುಳ್ಯ ತಾಲೂಕಿನ ಗುತ್ತಿಗಾರು ನಿವಾಸಿ. ಬೆಂಗಳೂರಿನ ಪಶು ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬನ್ನೇರುಘಟ್ಟ ಉದ್ಯಾನವನದಲ್ಲೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ಆಫ್ರಿಕಾದಲ್ಲಿ ವನ್ಯಜೀವಿಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಹುಲಿಗಳಿಗೆ ಮತ್ತು ವನ್ಯಜೀವಿಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಅರವಳಿಕೆ ಚುಚ್ಚುಮದ್ದು ನೀಡುವಿಕೆಯಲ್ಲಿ ಪರಿಣತಿ ಹೊಂದಿದ್ದಾರೆ.
ಚೀತಾಗಳಿಗೆ ಅರೆಪ್ರಮಾಣದಲ್ಲಿ ಅರವಳಿಕೆ ನೀಡಿ 16 ಗಂಟೆಗಳ ಪ್ರಯಾಣ ಮೂಲಕ ಭಾರತಕ್ಕೆ ಕರೆತರಲಾಗಿದೆ. ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇವರ ಕಾರ್ಯವನ್ನು ಶ್ಲಾಘಿಸಿ, ಸನತ್ ಕೃಷ್ಣ ಅವರ ಬಳಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. (ದಿಗ್ವಿಜಯ ನ್ಯೂಸ್)