ನಟ ಶಿವರಾಜಕುಮಾರ್ ಪುತ್ರಿಯಿಂದಲೂ ಸಿನಿಮಾ ನಿರ್ಮಾಣ; ಇಲ್ಲಿದೆ ಡಿಟೇಲ್ಸ್​..

Niveditha Shivarajkumar
Published on

ಬೆಂಗಳೂರು: ನಟಸಾರ್ವಭೌಮ ಡಾ.ರಾಜಕುಮಾರ್ ಕುಟುಂಬದಲ್ಲಿ ನಿರ್ಮಾಪಕಿಯಾಗಿ ಪಾರ್ವತಮ್ಮ ರಾಜಕುಮಾರ್​ ಅವರದ್ದು ದೊಡ್ಡ ಸಾಧನೆ. ಆ ಬಳಿಕ ಡಾ.ರಾಜ್ ಸೊಸೆಯಂದಿರಾದ ಅಶ್ವಿನಿ ಪುನೀತ್ ರಾಜಕುಮಾರ್, ಗೀತಾ ಶಿವರಾಜಕುಮಾರ್ ಕೂಡ ನಿರ್ಮಾಪಕಿಯರಾದರು. ಇದೀಗ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತಾ ಕೂಡ ಸಿನಿಮಾ ನಿರ್ಮಾಪಕಿ ಆಗಿದ್ದಾರೆ.

ನಿವೇದಿತಾ ಶಿವರಾಜಕುಮಾರ್ 'ಶ್ರೀಮುತ್ತು ಸಿನಿ ಸರ್ವಿಸ್' ಎಂಬ ಸಂಸ್ಥೆ ಮೂಲಕ ಈಗಾಗಲೇ ನಿರ್ಮಾಪಕಿ ಆಗಿದ್ದಾರೆ. ಈ ಸಂಸ್ಥೆಯಡಿ ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್​ಗಳು ನಿರ್ಮಾಣಗೊಂಡಿದ್ದರೂ ಇದುವರೆಗೆ ಸಿನಿಮಾ ನಿರ್ಮಾಣ ಆಗಿರಲಿಲ್ಲ. ಆದರೆ ಈಗ ಇದೇ ಸಂಸ್ಥೆ ಮೂಲಕ ನಿವೇದಿತಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪ್ರೊಡಕ್ಷನ್​ ನಂ. 1 ಎಂಬ ತಾತ್ಕಾಲಿಕ ಟೈಟಲ್​ನೊಂದಿಗೆ ಚೊಚ್ಚಲ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ, ಪಿಆರ್​​ಕೆ ನಿರ್ಮಾಣ ಸಂಸ್ಥೆಯಡಿ ಬಂದ 'ಮಯಾಬಜಾರ್' ಸಿನಿಮಾದಲ್ಲಿ ಸಹಾಯಕ ನಿರ್ದೇಶಕ ಆಗಿದ್ದ ವಂಶಿ ಈ ಚಿತ್ರದ ನಾಯಕ, ನಿರ್ದೇಶಕ. ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನ ದಾರಿಯಲಿ' ಸಿನಿಮಾದ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಇದೆ. ಜಯ್ ರಾಮ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ಐದು ಕಥೆಗಳ 'ಪೆಂಟಗನ್' ಸಿನಿಮಾದ ಕಿರಣ್ ಕುಮಾರ್ ನಿರ್ದೇಶನದ ಕಥೆಯಲ್ಲಿ ವಂಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಿವೇದಿತಾ ನಿರ್ಮಾಣದ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net