

ಬೆಂಗಳೂರು: ದೇಶಾದ್ಯಂತ ಹೃದಯಾಘಾತದಿಂದಾದ ಸಾವಿನ ಪ್ರಕರಣಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದರೂ ಸರ್ಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ದಿನೇದಿನೆ ಹೃದಯಾಘಾತದ ಸಾವಿನ ಪಟ್ಟಿ ಬೆಳೆಯುತ್ತಿದ್ದು, ಇಂದು ಕನ್ನಡ ಚಿತ್ರ ನಿರ್ದೇಶಕರೊಬ್ಬರ ಹೆಸರೂ ಆ ಪಟ್ಟಿಗೆ ಸೇರ್ಪಡೆ ಆಗಿದೆ.
ಕನ್ನಡ ಸಿನಿಮಾ ನಿರ್ದೇಶಕ ಕಿರಣ್ ಗೋವಿ ಇಂದು ಮಧ್ಯಾಹ್ನದ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಅವರು ಕಚೇರಿಯಲ್ಲಿ ಕೆಲಸದಲ್ಲಿರುವಾಗಲೇ ಎದೆನೋವು ಕಾಣಿಸಿಕೊಂಡಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ತೀವ್ರ ಅಸ್ವಸ್ಥರಾದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸಿಕೊಳ್ಳಲು ಯತ್ನಿಸಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.
ಇವರು ನಟ ರವಿಶಂಕರ್ ಗೌಡ ನಾಯಕನಾಗಿ ಅಭಿನಯಿಸಿರುವ ಪಯಣ ಸಿನಿಮಾ ನಿರ್ದೇಶನ ಮಾಡಿದ್ದರು. ಒರಟ ಖ್ಯಾತಿಯ ಪ್ರಶಾಂತ್ ಅಭಿನಯದ ಸಂಚಾರಿ, ಅಲ್ಲದೆ ಯಾರಿಗುಂಟು-ಯಾರಿಗಿಲ್ಲ. ಪಾರು w/o ದೇವದಾಸ್ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
ಜಾಹೀರಾತುಗಳ ಸಣ್ಣ ಪಾತ್ರಗಳ ನಟಿಸುತ್ತ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದ ಕಿರಣ್, ನಂತರ ಧಾರವಾಹಿಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದರು. ಕೆಎಸ್ಡಿಎಲ್ ಚಂದ್ರು, ಸುನಿಲ್ ಪುರಾಣಿಕ್, ರವಿಕಿರಣ್ ಮುಂತಾದವರ ಜತೆ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶನಕರಾಗಿದ್ದ ಇವರು ಮೂಲತಃ ತುಮಕೂರಿನವರು. ಕಿರಣ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.