ಪ್ಯಾನ್ ಇಂಡಿಯಾ 'ಕಂಗುವ' ಚಿತ್ರದಲ್ಲಿ ಸಮಸ್ಯೆ ಎತ್ತಿಹಿಡಿದ ಪ್ರೇಕ್ಷಕರು! ಬಗೆಹರಿಸಿದ್ದೇವೆ ಎಂದ ನಿರ್ಮಾಪಕರು | Kanguva

ವಿಜಯವಾಣಿ - 2024-11-15T184111.920
Published on

ತಮಿಳುನಾಡು: ಕಾಲಿವುಡ್​ ಸೂಪರ್​ಸ್ಟಾರ್ ಸೂರ್ಯ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ‘ಕಂಗುವಾ’ (Kanguva) ಇದೀಗ ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ. ಶಿವ ನಿರ್ದೇಶನದ ಈ ಬೃಹತ್ ಆಕ್ಷನ್ ಚಿತ್ರದಲ್ಲಿ ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ಕೆಇ ಜ್ಞಾನವೇಲ್ ರಾಜಾ, ವಂಶಿ ಮತ್ತು ಪ್ರಮೋದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದೇ ಆದರೂ ಒಂದು ಸಣ್ಣ ಸಮಸ್ಯೆಯನ್ನು ಚಿತ್ರತಂಡ ದೊಡ್ಡದಾಗಿ ಎದುರಿಸುತ್ತಿರುವುದು ಇದೀಗ ಮುನ್ನೆಲೆಗೆ ಬಂದಿದೆ.

ಹಲವಾರು ರಾಜ್ಯಗಳ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಕಂಗುವ' ಚಿತ್ರದ ಆಡಿಯೋ ಬಹಳ ಜೋರಿದ್ದು, ವೀಕ್ಷಕರ ಕಿವಿಗೆ ಹಾನಿಕಾರಕವಾಗಿದೆ. ಇದರಿಂದ ಚಿತ್ರವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಪ್ರಮಾಣವನ್ನು ಮೀರಿ ಧ್ವನಿ ಥಿಯೇಟರ್​ ಅನ್ನು ಆವರಿಸಿಕೊಂಡಿದೆ ಎಂದು ಅನೇಕರು ಚಿತ್ರತಂಡವನ್ನು ಜಾಲತಾಣಗಳಲ್ಲಿ ಟ್ಯಾಗ್​ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಸ್ವೀಕರಿಸಿದ ಚಿತ್ರದ ನಿರ್ಮಾಪಕರಾದ ಕೆ.ಇ. ಜ್ಞಾನವೇಲ್ ರಾಜಾ, ಚಿತ್ರಮಂದಿರಗಳಲ್ಲಿ ವಾಲ್ಯೂಮ್ ಅನ್ನು ಎರಡು ಹಂತಗಳಿಗೆ ಕಡಿಮೆ ಮಾಡಲು ವಿತರಕರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 15 ಅಥವಾ 16ರ ಸಂಜೆಯೊಳಗೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ ಪ್ರದರ್ಶಕರೊಂದಿಗೆ ಮಾತನಾಡಿದ್ದೇವೆ. ಚಿತ್ರದ ಧ್ವನಿ ವಿಚಾರದಲ್ಲಿ ಕೇಳಿ ಬಂದಿರುವ ವಿಪರೀತ ಹಾನಿಕಾರಕ ಜೋರು ಧ್ವನಿ ದೂರುಗಳನ್ನು ನಿಯಂತ್ರಿಸುವ ಸಲುವಾಗಿ ಇದೀಗ 'ವಾಲ್ಯೂಮ್' ಅನ್ನು ಎರಡು ಪಾಯಿಂಟ್​ ಕಡಿಮೆ ಮಾಡಲು ಎಲ್ಲರಲ್ಲೂ ವಿನಂತಿಸಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಸಮಸ್ಯೆ ಚಿತ್ರದ ಗಳಿಕೆಗೆ ಯಾವ ರೀತಿಯಲ್ಲಿಯೂ ತೊಂದರೆ ಮಾಡದೆ ಹೋದರೂ ನೆಗೆಟಿವ್ ಆಗಿ ಕಂಡುಬಂದಿರುವುದು ಸದ್ಯ ಸೂರ್ಯ ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net