ಅಂಗನವಾಡಿಗೆ ಮಲಯಾಳಿ ಶಿಕ್ಷಕಿ ನೇಮಕ: ಕೋರಿಕಂಡ ಗ್ರಾಮಸ್ಥರ ತೀವ್ರ ಆಕ್ರೋಶ ಹೈಕೋರ್ಟ್‌ನಲ್ಲಿ ದಾವೆ

New Project (18)
Published on

ಮುಳ್ಳೆರಿಯ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಜನರ ಬವಣೆಗೆ ಕೊನೆಯಿಲ್ಲದಾಗಿದೆ. ಕಾಲೇಜು, ಹೈಸ್ಕೂಲು, ಪ್ರಾಥಮಿಕ ವಿಭಾಗಗಳ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಿಸಿ ಗಡಿನಾಡಿನ ಕನ್ನಡಿಗರನ್ನು ಗೋಳುಹೊಯ್ಯುತ್ತಿರುವ ಕೇರಳ ಸರ್ಕಾರ ಸದ್ಯ ಅಂಗನವಾಡಿ ಶಾಲೆ ಶಿಕ್ಷಕಿಯರ ನೇಮಕದಲ್ಲೂ ಅನ್ಯಾಯವೆಸಗಿದ ಘಟನೆ ಯಾವುದೇ ಪರಿಹಾರ ಕಾಣದೆ ತೀವ್ರ ವಿಕೋಪಕ್ಕೆ ತಿರುಗಿದೆ.

ಗಡಿನಾಡು ಅಂಗನವಾಡಿ ಶಾಲೆಗಳಲ್ಲಿ ದ್ವಿಭಾಷೆ ಗೊತ್ತಿರುವ ಶಿಕ್ಷಕಿಯ ನೇಮಕ ಮಾಡುವ ಬದಲಾಗಿ ಕೇವಲ ಮಲಯಾಳ ಮಾತ್ರವೇ ಬಲ್ಲ ಶಿಕ್ಷಕಿಯನ್ನು ನೇಮಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಕಾರಡ್ಕ ಬ್ಲಾಕ್ ವ್ಯಾಪ್ತಿಯ ಗಡಿಗ್ರಾಮ ದೇಲಂಪಾಡಿ ಪಂಚಾಯಿತಿಯ ಅಡೂರು ಸಮೀಪದ ಕೋರಿಕಂಡ ಎಂಬಲ್ಲಿಯ ಅಂಗನವಾಡಿಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಮಲಯಾಳಿ ಶಿಕ್ಷಕಿಯನ್ನು ನೇಮಿಸಿರುವುದು ಭಾರಿ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಲೇರಿದೆ.

ಅಂಗನವಾಡಿ ನಿರ್ವಹಣಾ ಸಮಿತಿ(ಎ.ಎಲ್.ಎನ್.ಎಸ್ ಕಮಿಟಿ)ನೇತೃತ್ವದಲ್ಲಿ 15 ಮಂದಿಯ ಸಮಿತಿ ಕಾನೂನು ಹೋರಾಟದ ಹಾದಿ ಹಿಡಿದಿದೆ. ಈ ನಿಟ್ಟಿನಲ್ಲಿ ಕಳೆದ ಬುಧವಾರ ಎರ್ನಾಕುಳಂನಲ್ಲಿರುವ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸಮಿತಿ ಸದಸ್ಯರಾದ ಗಂಗಾಧರ ಅಡೂರು ಹಾಗೂ ನಯನ ಹೈಕೋರ್ಟ್ ನ್ಯಾಯಾಧೀಶರಾದ ಅನೂಪ್ ಅವರ ಮೂಲಕ ಈ ದಾವೆ ಹೂಡಿದೆ. ನ್ಯಾಯಾಲಯ ಖರ್ಚುವೆಚ್ಚ ನಿರ್ವಹಣೆಗೆ ಕೋರಿಕಂಡ ಅಂಗನವಾಡಿ ರಕ್ಷಣಾ ಸಮಿತಿ ರೂಪಿಸಿ ದಾವೆ ನಿರ್ವಹಣೆ ಮುನ್ನಡೆಸಲಿದೆ.

ಬುಡಕ್ಕೇ ಕೊಡಲಿಯೇಟು

ಸರ್ಕಾರಿ ಕಚೇರಿಗಳಲ್ಲಿ ಕುಳಿತಿರುವ ಮಲಯಾಳಿ ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಯುವುದು ಪ್ರತಿಯೊಂದು ಮಗುವಿನ ಹಕ್ಕು.ಹೀಗಿರುವಾಗ ಅಂಗನವಾಡಿಯಿಂದಲೇ ಮಗುವಿನ ಮೇಲೆ ಮಲಯಾಳ ಹೇರಿಕೆ ಮಾಡಿದರೆ ಕನ್ನಡ ಕಲಿಯಬೇಕಾದ ಮಕ್ಕಳು ಏನು ಮಾಡಬೇಕು ಎಂದು ಅಂಗನವಾಡಿ ವಿದ್ಯಾರ್ಥಿಯ ತಾಯಿಯವರಲ್ಲೊಬ್ಬರಾದ ನಯನ ಸಂಕಷ್ಟದ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಹಂತದಿಂದಲೇ ಕನ್ನಡ ಕಲಿಕೆಗೆ ಕೇರಳ ಸರ್ಕಾರ ಕೊಡಲಿಯೇಟು ಹಾಕಲು ನಿರ್ಧರಿಸಿದೆ ಎಂದು ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net