ದಿನಕ್ಕೆ 20 ಮೊಟ್ಟೆ ಸೇವನೆ, 1.5 ಟನ್​ ತೂಕ! ಕೋಟಿ ರೂ. ಬೆಲೆಬಾಳುವ ಈ ಕೋಣದ ದಿನಚರಿ ಕೇಳಿದ್ರೆ ಹುಬ್ಬೇರೋದು ಖಚಿತ | Buffalo

ವಿಜಯವಾಣಿ - 2024-11-15T164932.116
Published on

ಹರಿಯಾಣ: ಒಬ್ಬ ಮನುಷ್ಯ ತಾನು ಆರೋಗ್ಯಕರ ಜೀವನ ನಡೆಸಬೇಕು, ಕಟ್ಟುಮಸ್ತಾದ ದೇಹ ನನ್ನದಾಗಿರಬೇಕು ಎಂಬ ಆಲೋಚನೆಯಲ್ಲಿ ಉತ್ತಮ ಗುಣಮಟ್ಟ, ಪ್ರೋಟಿನ್​ಯುಕ್ತ ಆಹಾರಗಳನ್ನು ಕ್ರಮಬದ್ಧವಾಗಿ ಡಯಟ್​ ಹೆಸರಿನಡಿ ಸೇವಿಸುವ ಮೂಲಕ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತಾನೆ. ಇದಕ್ಕಾಗಿ ತನ್ನ ದೈನಂದಿನ ಕೆಲಸಗಳನ್ನು ಕೆಲವು ಗಂಟೆಗಳ ಕಾಲ ಬದಿಗಿಟ್ಟು, ಒಂದೆರೆಡು ತಾಸು ವ್ಯಾಯಾಮಗಳಿಗೆ ಮೀಸಲಿಡುತ್ತಾನೆ. ದೇಹದ ಆಕಾರವನ್ನು ನೋಡುಗರ ಗಮನಸೆಳೆಯುವಂತೆ ರೂಪಿಸಿಕೊಳ್ಳುತ್ತಾನೆ. ನಮಗೆಲ್ಲ ತಿಳಿದಿರುವಂತೆ ಇದು ಕೇವಲ ಮನುಷ್ಯರಲ್ಲಿ ಮಾತ್ರ ನೋಡಲು ಸಾಧ್ಯ. ಆದ್ರೆ, ಇಲ್ಲೊಬ್ಬರು ವ್ಯಕ್ತಿ, ನಾವು ಮಾತ್ರ ಏಕೆ ಡಯಟ್​, ಫಿಟ್ನೆಸ್​ ಮಾಡಬೇಕು? ನಮ್ಮ ಮನೆಯಲ್ಲಿರುವ ಕೋಣ (Buffalo) ಕೂಡ ಇದೇ ಮಾರ್ಗವನ್ನು ಅನುಸರಿಸಿ, ಫಿಟ್​ ಆಗಿರಬೇಕು ಎಂದು ವಿನೂತನ ಪ್ರಯತ್ನದಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.

1,500 ಕೆಜಿ ತೂಕ

ರೈತರ ಒಕ್ಕೂಟ, ಸಮ್ಮೇಳನ, ರೈತ ಜಾತ್ರೆ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ನೋಡುಗರ ಕಣ್ಮನ ಸೆಳೆಯುವ ಹರಿಯಾಣದ ಈ ಕೋಣದ ಹೆಸರು ಅನ್ಮೋಲ್​. 23 ಕೋಟಿ ರೂ. ಬೆಲೆಬಾಳುವ ಅನ್ಮೋಲ್​, ಹರಿಯಾಣದ ಸುತ್ತಮುತ್ತಲಿನ ಊರುಗಳಲ್ಲಿ ತನ್ನದೇ ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ. ಪುಷ್ಕರ್ ಮೇಳ ಮತ್ತು ಮೀರತ್‌ನಲ್ಲಿ ನಡೆಯುವ ಅಖಿಲ ಭಾರತ ರೈತರ ಮೇಳ ಸೇರಿದಂತೆ ಭಾರತದಾದ್ಯಂತ ಕೃಷಿ ಮೇಳಗಳಲ್ಲಿ ಸದ್ದು ಮಾಡುತ್ತಿರುವ ಈ ಕೋಣ, ಬರೋಬ್ಬರಿ 1,500 ಕೆಜಿ ತೂಕ ತೂಗುತ್ತದೆ. ಅದರ ಗಾತ್ರ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸದ್ದು ಮಾಡುತ್ತಿರುವ ಅನ್ಮೋಲ್​ ಹೆಸರಿನ ಕೋಣ, ಹಲವು ವಿಶೇಷತೆಗಳಿಂದ ಕೂಡಿದೆ.

ಡ್ರೈ ಫ್ರೂಟ್ಸ್​, 20 ಮೊಟ್ಟೆ

ಪ್ರತಿದಿನ ಮನುಷ್ಯರಂತೆ ತನ್ನ ದಿನಚರಿ ಆರಂಭಿಸುವ ಅನ್ಮೋಲ್, ಅತ್ಯಂತ ಲಕ್ಸುರಿ ಜೀವನಶೈಲಿ ನಡೆಸುತ್ತಿದೆ. ಇದರ ಒಂದು ದಿನದ ಖರ್ಚು ಬರೋಬ್ಬರಿ 1,500 ರೂ. ಇದೆ. ಕೋಣದ ಡಯಟ್​ಗಾಗಿ ಡ್ರೈ ಫ್ರೂಟ್ಸ್​, 20 ಮೊಟ್ಟೆ, ಹೈ ಕೆಲೋರಿ ಆಹಾರ ಅನ್ಮೋಲ್​ ಕೈ-ಕಾಲನ್ನು ದಷ್ಟಪುಷ್ಟವಾಗಿಸಿದೆ. ಕೋಣವನ್ನು ತಮ್ಮ ಮನೆಯ ಮಗನಂತೆ ನೋಡಿಕೊಳ್ಳುತ್ತಿರುವ ಮಾಲೀಕ ಗಿಲ್​, ಪ್ರತಿದಿನ 1,500 ರೂ. ಹಣವನ್ನು ಅದರ ಆರೋಗ್ಯ, ಡಯಟ್​ಗಾಗಿಯೇ ಮೀಸಲಿಡುತ್ತಿದ್ದಾರೆ. ನಮ್ಮಂತೆಯೇ ಅದು ಕೂಡ ಉತ್ತಮ ಆರೋಗ್ಯ ಮತ್ತು ಶಕ್ತಿಯುತವಾಗಿರಲಿ ಎಂಬುದು ಗಿಲ್​ ಅಭಿಪ್ರಾಯ.

ಅನ್ಮೋಲ್​ ಮೆನುವಿನಲ್ಲಿ ಏನೇನಿದೆ?

ಬೆಳಗ್ಗೆ ಎದ್ದ ತಕ್ಷಣ ಶಿಸ್ತಿನಿಂದ ತನ್ನ ಆಹಾರ ಕ್ರಮ ಪ್ರಾರಂಭಿಸುವ ಅನ್ಮೋಲ್​, 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆಜಿ ದಾಳಿಂಬೆ, 5 ಕೆಜಿ ಹಾಲು ಮತ್ತು 20 ಮೊಟ್ಟೆಗಳನ್ನು ಸೇವಿಸುತ್ತದೆ. ಇದರ ಜತೆಗೆ ಹಸಿರು ಮೇವು, ತುಪ್ಪ, ಸೋಯಾಬೀನ್ ಮತ್ತು ಕಾರ್ನ್ ಅನ್ನು ಸಹ ಆನಂದಿಸುತ್ತದೆ. ಈ ವಿಶೇಷ ಆಹಾರವು ಅನ್ಮೋಲ್ ಯಾವಾಗಲೂ ಪ್ರದರ್ಶನಗಳು ಮತ್ತು ಸಂತಾನೋತ್ಪತ್ತಿಗಾಗಿ ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಕೋಣಕ್ಕೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿಸುವ ಗಿಲ್​, ಅದರ ತಾಯಿ ಮತ್ತು ಅಕ್ಕನನ್ನು ಮಾರಾಟ ಮಾಡಿದ್ದರಂತೆ. ಅನ್ಮೋಲ್​ ತಾಯಿ (ಎಮ್ಮೆ) ದಿನಕ್ಕೆ 25 ಲೀಟರ್​ ಹಾಲನ್ನು ಕೊಡುವ ಸಾಮರ್ಥ್ಯವನ್ನು ಹೊಂದಿತ್ತು ಎಂದು ಮಾಲೀಕರು ತಿಳಿಸಿದ್ದಾರೆ.

ಅನ್ಮೋಲ್‌ ವೀರ್ಯಕ್ಕೆ ಹೆಚ್ಚಿದ ಬೇಡಿಕೆ

ಅನ್ಮೋಲ್‌ನ ಪ್ರಭಾವಶಾಲಿ ಗಾತ್ರ ಮತ್ತು ಆಹಾರವು ಅದರ ಮೌಲ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಒಳ್ಳೆಯ ಆಹಾರವನ್ನು ನೀಡುತ್ತಿರುವ ಮಾಲೀಕ ಗಿಲ್​, ವಾರಕ್ಕೆ ಎರಡು ಬಾರಿ ಅನ್ಮೋಲ್‌ನ ವೀರ್ಯವನ್ನು ಸಂಗ್ರಹಿಸಿಡುತ್ತಾರೆ. ಇದಕ್ಕೆ ತಳಿಗಾರರಲ್ಲಿ ಹೆಚ್ಚಿನ ಬೇಡಿಕೆಯಿದೆ. ಕೋಣದಿಂದ ಹೊರತೆಗೆಯುವ ಪ್ರತಿ ವೀರ್ಯಕ್ಕೆ 250 ರೂ. ಬೆಲೆ ನಿಗದಿಯಾಗಿದ್ದು, ಇದನ್ನು ನೂರಾರು ಜಾನುವಾರುಗಳ ಜನನಕ್ಕೆ ಬಳಸಬಹುದಾಗಿದೆ. ವೀರ್ಯ ಮಾರಾಟದಿಂದ ಮಾಸಿಕ 4-5 ಲಕ್ಷ ರೂ. ಆದಾಯ ಲಭ್ಯವಾಗುತ್ತಿದೆ. ಈ ಹಣದಿಂದ ಬಂದ ಆದಾಯ ಅನ್ಮೋಲ್​ ಸಾಕುವ ವೆಚ್ಚಗಳನ್ನು ನಿರ್ವಹಿಸಲು ಸಹಾಯವಾಗುತ್ತಿದೆ ಎಂದು ಗಿಲ್‌ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net