ಪ್ರಚೋದನಕಾರಿ ಭಾಷಣ ಆರೋಪ ಪ್ರಕರಣ : ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಕರಣಕ್ಕೆ ಹೈ ತಡೆ

highcourt
Published on

ಬೆಂಗಳೂರು: ವಕ್ಫ್ ಆಸ್ತಿ ವಿವಾದ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಸಂಬಂಧ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಅದರ ಸಂಬಂಧ ನೀಡಿರುವ ಪೊಲೀಸ್ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ.

ಪ್ರಕರಣ ಸಂಬಂಧ ಹಾವೇರಿ ಜಿಲ್ಲೆಯ ಸವಣೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ನ.16 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಅರ್ಜಿದಾರರ ವಿರುದ್ಧ ಆರೋಪಗಳು ಸತ್ಯಕ್ಕೆ ದೂರವಾದದ್ದು. ಸುಖಾಸಮ್ಮನೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಎಂದು ಪೀಠಕ್ಕೆ ತಿಳಿಸಿದರು.

ನಾವು ಬೇರೊಬ್ಬರ ಪರವಾಗಿ ಮಾತನಾಡಲಾಗದು. ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ದೂರಿನಲ್ಲಿನ ಕೊನೆಯ ನಾಲ್ಕು ಸಾಲುಗಳಲ್ಲಿನ ಹೇಳಿಕೆಗಳು ಬೇಕಿರಲಿಲ್ಲ’ ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್.ಜಗದೀಶ್ ಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ಪೀಠವು ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಲಾಗಿದೆ ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net