

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ದಿಢೀರ್ ಹಿಂದೆ ಸರಿದ ಬೆನ್ನಲ್ಲೇ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಮೂಲದ ಕಮಲಾ ಹ್ಯಾರಿಸ್ (Kamala Harris) ಸನ್ನದ್ಧರಾದರು. ಸದ್ಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದಿರುವ ಕಮಲಾಗೆ ಅಮೆರಿಕಾದ ಹೆಸರಾಂತ ಸೆಲೆಬ್ರಿಟಿಗಳಿಂದ ವ್ಯಾಪಕ ಬೆಂಬಲ ಲಭಿಸಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿದ್ದು, ಕಮಲಾ ಹ್ಯಾರಿಸ್ ಪರ ಖ್ಯಾತ ಪಾಪ್ ಗಾಯಕಿ ಟೇಲರ್ ಸ್ವಿಫ್ಟ್, ಓಪ್ರಾ ವಿನ್‌ಫ್ರೇ, ಮೆರಿಲ್ ಸ್ಟ್ರೀಪ್, ಕ್ರಿಸ್ ರಾಕ್ ಮತ್ತು ಜಾರ್ಜ್ ಕ್ಲೂನಿ ಸೇರಿದಂತೆ ಹಲವಾರು ಸ್ಟಾರ್ ಸೆಲೆಬ್ರಿಟಿಗಳು ಬ್ಯಾಟ್ ಬೀಸಿದ್ದಾರೆ. ಇನ್ನು ಈ ಸಾಲಿಗೆ ಟೈಟಾನಿಕ್ ಚಿತ್ರದ ನಟ, ಆಸ್ಕರ್ ಪ್ರಶಸ್ತಿ ವಿಜೇತ ಲಿಯೊನಾರ್ಡೊ ಡಿಕಾಪ್ರಿಯೊ ಅವರು, ವಿಡಿಯೋ ಮುಖೇನ ಹ್ಯಾರಿಸ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ (ಅ.25) ಬಿಡುಗಡೆ ಮಾಡಿದ ವೀಡಿಯೊದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಮೆಚ್ಚಿ ಮಾತನಾಡಿರುವ ನಟ, "ದೇಶದಲ್ಲಿ ಹವಾಮಾನ ಬದಲಾವಣೆಗಳು ಹೆಚ್ಚಿವೆ. ಇದರಿಂದ ಭೂಮಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಮತ್ತು ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ. ನಮ್ಮ ಆರ್ಥಿಕತೆ ಹಾಗೂ ನಮ್ಮನ್ನು ಉಳಿಸಲು ಒಂದು ದಿಟ್ಟ ಹೆಜ್ಜೆಯ ಅಗತ್ಯವಿದೆ. ಅದಕ್ಕಾಗಿಯೇ ನಾನು ಕಮಲಾ ಹ್ಯಾರಿಸ್‌ಗೆ ಮತ ಹಾಕಲು ಬಯಸಿದ್ದೇನೆ" ಎಂದಿದ್ದಾರೆ.
"ದೇಶದ ಹೆಲೆನ್ ಮತ್ತು ಮಿಲ್ಟನ್‌ನಲ್ಲಿ ಉಂಟಾದ ಚಂಡಮಾರುತಗಳು ವಿನಾಶಕ್ಕೆ ಕಾರಣವಾಯಿತು. ಇದರಿಂದ ಅನೇಕರ ಜೀವನಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಹವಾಮಾನ ವೈಪರೀತ್ಯದಿಂದ ಆದ ತೊಂದರೆಗಳು ಜನಜೀವನವನ್ನು ಸಂಪೂರ್ಣವಾಗಿ ತತ್ತರಿಸುವಂತೆ ಮಾಡಿದೆ. ಈ ಪ್ರಕೃತಿ ವಿಕೋಪಗಳು ಸುಮಾರು 100 ಬಿಲಿಯನ್ಗೂ ಅಧಿಕ ನಷ್ಟವನ್ನು ಉಂಟುಮಾಡಿದೆ. ಚಂಡಮಾರುತದಂತಹ ವಿಕೋಪಗಳಿಗೆ ಸಿಲುಕಿದ ಎಷ್ಟೋ ಮಂದಿ ತಮ್ಮ ಪ್ರೀತಿ ಪಾತ್ರರನ್ನು, ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹೀಗಾಗಿ ನಮ್ಮ ಆರ್ಥಿಕತೆ, ಜೀವ, ಜೀವನ ಉಳಿಸುವುದಕ್ಕೆ ದಿಟ್ಟ ಹೆಜ್ಜೆ ತೆಗೆದುಕೊಳ್ಳುವ ವ್ಯಕ್ತಿಯ ಅಗತ್ಯತೆ ನಮಗಿದೆ. ಹೀಗಾಗಿ ನಾನು ಕಮಲಾರನ್ನು ಗೆಲ್ಲಿಸಲು ಎದುರುನೋಡುತ್ತಿದ್ದೇನೆ. ನೀವು ನನ್ನ ಜತೆ ಕೈಜೋಡಿಸಿ" ಎಂದು ನೋಡುಗರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).