

"ಬಾರ್ಡರ್', "ಉರಿ: ದ ಸರ್ಜಿಕಲ್ ಸ್ಟ್ರೆ$ಕ್', "ಶೇರ್ಶಾಹ್', "ಮೇಜರ್', "ದ ಘಾಜಿ ಅಟ್ಯಾಕ್', "ಸ್ಯಾಮ್ ಬಹದ್ದೂರ್', "ಮೇಜರ್' ಸೇರಿ ಭಾರತೀಯ ಸೈನಿಕರ ಸಾಹಸಗಾಥೆಗಳ ಕುರಿತು ಹಲವು ಬಯೋಪಿಕ್ಗಳು, ನೈಜ ಟನೆಯಾಧಾರಿತ ಚಿತ್ರಗಳು ಬಂದಿವೆ. ಅದೇ ಸಾಲಿಗೆ ಸೇರುವ ಸಿನಿಮಾ "ಅಮರನ್'. ರಾಷ್ಟ್ರೀಯ ರೈಲ್ಸ್ನ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತ ಚಿತ್ರವಿದು. ಕಾಲಿವುಡ್ ನಟ ಶಿವಕಾರ್ತಿಕೇಯನ್ ಮುಕುಂದ್ ಪಾತ್ರದಲ್ಲಿ ನಟಿಸಿದ್ದು, ಅವರ ಪತ್ನಿ ಇಂದೂ ರೆಬೆಕ್ಕಾ ವರ್ಘೀಸ್ ಆಗಿ ಸಾಯಿಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೇ ತಿಂಗಳ 31ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೆ ಟ್ರೇಲರ್ ರಿಲೀಸ್ ಆಗಿದ್ದು, ಎಮೋಷನ್ಸ್ ಜತೆಗೆ ಆ್ಯಕ್ಷನ್ ಸನ್ನಿವೇಶಗಳು ಗಮನ ಸೆಳೆಯುವಂತಿವೆ. ಶಿವ್ ಆರೂರ್ ಮತ್ತು ರಾಹುಲ್ ಸಿಂಗ್ ಬರೆದಿದ್ದ "ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್' ಪುಸ್ತಕವನ್ನು ಆಧರಿಸಿ ರಾಜಕುಮಾರ್ ಪೆರಿಯಾಸ್ವಾಮಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತವಿರಲಿದೆ.
ಯಾರು ಮೇಜರ್ ಮುಕುಂದ್?
ತಮಿಳು ನಾಡು ಮೂಲದ ಮೇಜರ್ ಮುಕುಂದ್ ವರದರಾಜನ್ ಸೇನೆ ಹಿನ್ನೆಯೆಲಿಂದ ಬಂದವರು. ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಓದಿದ ಬಳಿಕ ಅಜ್ಜ, ಚಿಕ್ಕಪ್ಪಂದಿರಂತೆ ತಾನೇ ಸೇನೆ ಸೇರಬೇಕು ಅಂತ ಆಸೆಪಟ್ಟ ಅವರು, ತಮ್ಮ 23ನೇ ವಯಸ್ಸಿನಲ್ಲಿ ಸೇನೆ ಸೇರಿದರು. ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು 2006ರಲ್ಲಿ ಲೆಫ್ಟಿನೆಂಟ್ ಆಗಿ ರಜಪುತಾನಾ ರೆಜಿಮೆಂಟ್ಗೆ ಆಯ್ಕೆಯಾದರು. 2008ರಲ್ಲಿ ಕ್ಯಾಪ್ಟನ್ ಆಗಿ ಭಡ್ತಿ ಪಡೆದ ಅವರು, ಲೆಬನಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
2012ರಲ್ಲಿ ಮೇಜರ್ ಆಗಿ ಪ್ರಮೋಷನ್ ಪಡೆದ ಬಳಿಕ ರಾಷ್ಟ್ರೀಯ ರೈಲ್ಸ್ನ 44ನೇ ಬೆಟಾಲಿಯನ್ನೊಂದಿಗೆ ಜಮ್ಮು ಕಾಶ್ಮೀರದ ಶೋಪಿಯಾನ್ನಲ್ಲಿ ಕಾರ್ಯನಿರ್ವಹಿಸತೊಡಗಿದರು. 2014ರಲ್ಲಿ ಉಗ್ರರ ಕುರಿತ ಮಾಹಿತಿ ದೊರೆತು ತಮ್ಮ ತಂಡದ ಜತೆ ಕಾರ್ಯಾಚರಣೆಗೆ ಹೋದ ಮೇಜರ್ ಮುಕುಂದ್, ಆ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ನ ಕಮಾಂಡರ್ ಉಗ್ರ ಅಲ್ತಾಫ್ ವಾನಿ ಸೇರಿ ಮೂವರು ಉಗ್ರರನ್ನು ಸದೆಬಡಿದರು. ಆದರೆ, ಕಾರ್ಯಾಚರಣೆಯ ವೇಳೆ ಮೂರು ಗುಂಡುಗಳು ಅವರ ದೇಹ ಹೊಕ್ಕಿದ್ದವು. 31ನೇ ವಯಸ್ಸಿನಲ್ಲಿ ಮುಕುಂದ್ ವೀರಮರಣವನ್ನಪ್ಪಿದರು.
ಸಾಯಿ ಹಳೆಯ ಹೇಳಿಕೆ ವಿವಾದ:
"ಅಮರನ್' ಚಿತ್ರದ ಟ್ರೇಲರ್ ವೈರಲ್ ಆಗಿ, ರಿಲೀಸ್ ದಿನಾಂಕ ಹತ್ತಿರವಾದಂತೆ, ನಟಿ ಸಾಯಿ ಪಲ್ಲವಿಯ ಎರಡು ವರ್ಷದ ಹಿಂದಿನ ವಿವಾದಾತ್ಮಕ ಹೇಳಿಕೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. "ಪಾಕಿಸ್ತಾನದ ಜನ ನಮ್ಮ ಸೈನಿಕರನ್ನು ಭಯೋತ್ಪಾದಕರಂತೆ ನೋಡುತ್ತಾರೆ, ಅಂತೆಯೇ ನಾವು ಕೂಡ ಪಾಕಿಸ್ತಾನದ ಸೈನಿಕರನ್ನು ಉಗ್ರರಂತೆ ನೋಡುತ್ತೇವೆ. ಈ ದೃಷ್ಟಿಕೋನ ಬದಲಾದರೂ, ಹಿಂಸೆಯೇ ನನಗೆ ಅರ್ಥವಾಗುವುದಿಲ್ಲ' ಎಂದಿದ್ದರು. ಇದೀಗ ಈ ವಿಡಿಯೋ ಮತ್ತೆ ವೈರಲ್ ಆಗಿದ್ದು, ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಇಂತಹ ಹೇಳಿಕೆ ನೀಡುವವರಿಗೆ "ಅಮರನ್' ಹಾಗೂ "ರಾಮಾಯಣ' ಚಿತ್ರದಲ್ಲಿ ಅವಕಾಶ ಯಾಕೆ ನೀಡುತ್ತಾರೆ ಎಂದು ಜಾಲತಾಣಿಗರು ಪ್ರಶ್ನಿಸಿದ್ದಾರೆ.