

ಕನೌಜ್: 28ರ ಹರೆಯದ ನಿರುದ್ಯೋಗಿಯೊಬ್ಬರು ತಮ್ಮ ಎಲ್ಲಾ ಶಿಕ್ಷಣ ಪ್ರಮಾಣಪತ್ರಗಳನ್ನು ಸುಟ್ಟುಹಾಕಿ, ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಭೂದ್‌ಪುರವಾ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪೊಲೀಸರು ಶುಕ್ರವಾರ (ಫೆ.23) ತಿಳಿಸಿದ್ದಾರೆ.
ಬ್ರಿಜೇಶ್ ಪಾಲ್ ಇತ್ತೀಚೆಗೆ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಈ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೀವ್ರ ಅಸಮಾಧಾನಗೊಂಡಿದ್ದರು. ಈ ವಿಷಯವನ್ನು ನಮ್ಮೊಂದಿಗೆ ಪ್ರಸ್ತಾಪಿಸಿದ್ದರು ಎಂದು ಅವರ ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಗುರುವಾರ ಆತ್ಮಹತ್ಯೆಗೆ ಶರಣಾದ ಪಾಲ್, ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು, ಮೃತಪಟ್ಟಿದ್ದಾರೆ. ತಮ್ಮ ಸಾವಿಗೆ ಮುಖ್ಯ ಕಾರಣವೇ ನಿರುದ್ಯೋಗ ಎಂದು ಹೇಳಿಕೊಂಡಿದ್ದಾರೆ.
ಡೆತ್ನೋಟ್ನಲ್ಲಿ ಬರೆದ ವಿಷಯ ಹೀಗಿದೆ. "ನನಗೆ ತುಂಬ ಬೇಸರವಾಗಿದೆ. ಉದ್ಯೋಗ ಸಿಗದಿದ್ದ ಮೇಲೆ ಈ ಡಿಗ್ರಿ, ಅದರ ಸರ್ಟಿಫಿಕೇಟ್ ಇದ್ದು ಏನು ಪ್ರಯೋಜನ? ನಾನು ನಿಮಗೆ ದ್ರೋಹ ಮಾಡಿದ್ದೇನೆ. ಸಹೋದರಿಯನ್ನು ಅತ್ಯಂತ ಒಳ್ಳೆಯ ರೀತಿಯಲ್ಲಿ ಮದುವೆ ಮಾಡಿಕೊಡಿ" ಎಂದು ಬರೆದು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ರಿಜೇಶ್ ಪಾಲ್ ಅವರ ತಂದೆ ದೆಹಲಿಯಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಗ್ರಾಮದಲ್ಲಿ ನಾಲ್ಕು ಬಿಘಾ ಜಮೀನು ಹೊಂದಿದ್ದಾರೆ.
ಪಾಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆ ಎಸ್‌ಎಚ್‌ಒ ವಿಷ್ಣು ಕಾಂತ್ ತಿವಾರಿ ತಿಳಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇವರ(ಬಿಜೆಪಿ) ಆಡಳಿತದಲ್ಲಿ ಉದ್ಯೋಗ ಹುಡುಕುವುದು ಕನಸು ಎಂದು ವ್ಯಂಗ್ಯವಾಡಿದ್ದಾರೆ.
"ಅಧಿಕಾರಕ್ಕೆ ಬರಲು ಎಲ್ಲ ತಂತ್ರಗಳನ್ನು ಹೂಡುವ ಬಿಜೆಪಿ, ಉದ್ಯೋಗ ಕೊಡಿಸುವ ಹೆಸರಲ್ಲಿ ತಿರುಗಿ ಬೀಳುತ್ತಿದೆ. ನಿರುದ್ಯೋಗದ ದುರಂತದಿಂದ ಮನನೊಂದ ಕನೌಜ್‌ನ ಯುವಕ ಬ್ರಿಜೇಶ್ ಪಾಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖದ ಸುದ್ದಿಯಾಗಿದೆ" ಎಂದು ಯಾದವ್ ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).