More

    ಸಾಗರ ಮೀನು ಮಾರುಕಟ್ಟೆ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನ: ಶಾಸಕ ಗೋಪಾಲಕೃಷ್ಣ ಬೇಳೂರು

    ಸಾಗರ: ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದ್ದು ಸಾಗರವನ್ನು ಸುಂದರಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಭೆಯ ನಂತರ ಮಾತನಾಡಿ, ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇದಕ್ಕೆ ಅನುದಾನ ನೀಡಿದ್ದರು. ಹಿಂದಿನ ಶಾಸಕರು ಈ ಕೆಲಸವನ್ನು ವ್ಯವಸ್ಥಿತವಾಗಿ ಮುಂದುವರಿಸಲಿಲ್ಲ, ನಾನು ಕ್ಷೇತ್ರದ ಶಾಸಕನಾದ ಮೇಲೆ ಇದರ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನ ತೆಗೆದಿರಿಸಿದ್ದೇನೆ ಎಂದರು.
    ಬಿದ್ದು ಹೋಗಿರುವ ಜೈಲಿನ ಕಾಂಪೌಂಡ್‌ನ್ನು 1.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಯಿಂದಲೂ ಕ್ಷೇತ್ರದ ವಿವಿಧ ದೇವಾಲಯಗಳಿಗೆ ಅನುದಾನ ನೀಡಲಾಗುತ್ತಿದೆ. ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಗಣಪತಿ ದೇವಾಲಯದ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ತೆಗೆದಿರಿಸಲಾಗಿದೆ. ದೇಗುಲದ ಮುಂಭಾಗದಲ್ಲಿ ಗೋಪುರ ನಿರ್ಮಾಣ ಮತ್ತು ಸೋರುವ ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು. ಶಾಸಕರ ನಿಧಿಯಿಂದಲೂ ಹೆಚ್ಚಿನ ಅನುದಾನವನ್ನು ಗಣಪತಿ ದೇವಾಲಯಕ್ಕೆ ನೀಡುತ್ತೇನೆ ಎಂದು ಭರವಸೆ ನೀಡಿದರು.
    ನೆಹರು ಮೈದಾನದಲ್ಲಿ ರಂಗಮಂದಿರ ನಿರ್ಮಿಸಲಾಗುವುದು. ಸೊರಬ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸ್ಥಳೀಯ ನಿವಾಸಿಗಳ ಮೂರು ಸಭೆಗಳನ್ನು ನಡೆಸಲಾಗಿದೆ. ಮತ್ತೊಮ್ಮೆ ಅವರನ್ನು ಕರೆದು ಉಪವಿಭಾಗಾಧಿಕಾರಿಗಳ ಜತೆ ಮಾತನಾಡಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಸಾಗರದ ಅಂಬೇಡ್ಕರ್ ವೃತ್ತದಲ್ಲಿರುವ ವೀರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುತ್ತದೆ. ಇಲ್ಲಿ ಜಾಗದ ಒತ್ತುವರಿ ಆಗಿರುವ ಬಗ್ಗೆಯೂ ನನಗೆ ದೂರುಗಳು ಬಂದಿವೆ. ಅವೆಲ್ಲವನ್ನೂ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಸಾಗರದ ಗ್ರಂಥಾಲಯದ ಕಟ್ಟಡ ಶಿಥಿಲಗೊಂಡಿದ್ದು ದುರಸ್ತಿಗೊಳಿಸಿ ಹಾಗೂ ಡಿಜಿಟಲೀಕರಣಗೊಳಿಸಿ ಎಂದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕೋರಿದ್ದಾರೆ. ಶೀಘ್ರವೇ ಗ್ರಂಥಾಲಯಕ್ಕೆ ಭೇಟಿ ನೀಡಿ, ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.
    ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ವಿಶೇಷ ಕರ್ತವ್ಯ ಅಧಿಕಾರಿ ಟಿ.ಪಿ.ರಮೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ನಾಲ್ಕೂ ದಿಕ್ಕಿನಲ್ಲೂ ಫುಡ್‌ಕೋರ್ಟ್
    ಬರ ಪರಿಹಾರದ ತುರ್ತು ಕಾಮಗಾರಿಗಳಿಗಾಗಿ ಸಾಗರ ಮತ್ತು ಹೊಸನಗರ ತಾಲೂಕಿಗೆ ತಲಾ 25 ಲಕ್ಷ ರೂ. ನೀಡಲಾಗಿದೆ. ಈ ಹಣದಲ್ಲಿ ನೀರಿಗೆ ಸಂಬಂಧಿಸಿದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಸಾಗರದಲ್ಲಿ ಎಲ್ಲೆಂದರಲ್ಲಿ ಬೀದಿ ಅಂಗಡಿಗಳನ್ನು ಹಾಕಲಾಗುತ್ತಿದ್ದು, ಊರಿನಲ್ಲಿ ದಿನೇ ದಿನೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ನಗರದ ನಾಲ್ಕೂ ಕಡೆಗಳಲ್ಲಿ ಫುಡ್‌ಕೋರ್ಟ್ ಮಾಡಲಾಗುತ್ತದೆ. ಬೀದಿಬದಿ ವ್ಯಾಪಾರಿಗಳು ಅಲ್ಲಿ ವಹಿವಾಟು ಮಾಡಬೇಕು. ಮನಬಂದಂತೆ ರಸ್ತೆಗಳ ಮೇಲೆ ಅಂಗಡಿಗಳನ್ನಿಟ್ಟರೆ ನಿರ್ದಾಕ್ಷೀಣ್ಯವಾಗಿ ನಗರಸಭೆಯಿಂದ ಅಂಗಡಿಗಳನ್ನು ತೆರವುಗೊಳಿಸಲಾಗುವುದು. ತಾಲೂಕು ಕಚೇರಿಯ ನೂತನ ಕಟ್ಟಡವನ್ನು ಈ ತಿಂಗಳ ಕೊನೆ ಅಥವಾ ಮಾರ್ಚ್ ಮೊದಲನೇ ವಾರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts