

ಉತ್ತರಪ್ರದೇಶ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ನೆನಪಿಸುವಂಥ ಹೊಸ ತಳಿಯ ತಾವರೆಯೊಂದನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶೇಷವಾದ ಈ ತಾವರೆಯನ್ನು ಇಂದು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಇಂದು ಉತ್ತರಪ್ರದೇಶದ ಲಕ್ನೋದಲ್ಲಿ ಈ ವಿನೂತನ ತಾವರೆಯ ತಳಿಯನ್ನು ಅನಾವರಣಗೊಳಿಸಿದರು. ಲಕ್ನೋದ ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಈ ತಳಿಯನ್ನು ಅಭಿವೃದ್ಧಿಪಡಿಸಿದೆ.
ಈ ವಿಶಿಷ್ಟ ಕಮಲದ ಪ್ರಭೇದವನ್ನು "ನಮೋಃ 108" ಎಂದು ಹೆಸರಿಸಿದ್ದಕ್ಕಾಗಿ ಜಿತೇಂದ್ರ ಸಿಂಗ್ ಎನ್ಬಿಆರ್ಐಯನ್ನು ಶ್ಲಾಘಿಸಿದರು. ಇದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅವರ ಅಧಿಕಾರಾವಧಿಯ ಹತ್ತನೇ ವರ್ಷದಲ್ಲಿ ಬಂದಿದೆ. ಇದು ನರೇಂದ್ರ ಮೋದಿಯವರ ಅವಿರತ ಉತ್ಸಾಹಕ್ಕೆ ದೊಡ್ಡ ಉಡುಗೊರೆ ಎಂದು ಅವರು ಹೇಳಿದರು.
ನೆಲಂಬೊ ನ್ಯೂಸಿಫೆರ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಕಮಲದ ಹೂವು 108 ದಳಗಳನ್ನು ಹೊಂದಿದೆ. ಗರಿಷ್ಠ ಹತ್ತು ಇಂಚು ವ್ಯಾಸ ಗಾತ್ರದ ಈ ಹೂವು ಮಾರ್ಚ್-ಡಿಸೆಂಬರ್ನಲ್ಲಿ ಅರಳುತ್ತದೆ. ಇದನ್ನು ಸರೋವರ, ತೊಟ್ಟಿ, ಕುಂಡದಲ್ಲೂ ಬೆಳೆಯಬಹುದಾಗಿದೆ.