ಜಾರ್ಖಂಡ್​ ಹಗರಣ: ಇಡಿಯಿಂದ ಮಹಿಳಾ ಅಧಿಕಾರಿ ವಿಚಾರಣೆಗೆ ಕೋರ್ಟ್​ ಅನುಮತಿ

Pooja Singhal
Published on

ರಾಂಚಿ: ಇತ್ತೀಚೆಗೆ ಜಾರ್ಖಂಡ್​ನಲ್ಲಿ ಬಯಲಾದ ಹೈ ಫ್ರೊಫೈಲ್​​ ಹಗರಣದಲ್ಲಿ ಬಂಧನಕ್ಕೊಳಗಾದ ಐಎಎಸ್​ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಿ ನಾಲ್ಕು ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿದೆ.

ಸೋಮವಾರ ಸ್ಥಳೀಯ ನ್ಯಾಯಾಲಯ ಅಮಾನತು ಆದೇಶ ಹೊರಡಿಸಿದ್ದು, ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಲಿದೆ. ಸರ್ಕಾರದ ಯೋಜನೆಯಲ್ಲಿ ಕೋಟ್ಯಂತರ ರೂ. ಹಗರಣ ಬೆಳಕಿಗೆ ಬಂದಿತ್ತು. ದಾಳಿ ವೇಳೆ ಸುಮಾರು 18 ಕೋಟಿ ರೂ. ಜಪ್ತಿ ಮಾಡಲಾಗಿತ್ತು.

ಸದ್ಯ ಅಧಿಕಾರಿ ಪೂಜಾ ಸಿಂಘಾಲ್​ ಹಾಗೂ ಸಿಎ ಸುಮನ್​ ಕುಮಾರ್​ನನ್ನು ಅಮಾನತುಗೊಳಿಸಿ, ಜಾರಿ ನಿರ್ದೇಶನಾಲಯದ ಹೆಚ್ಚಿನ ವಿಚಾರಣೆಗೊಳಪಡಿಸಲಿದೆ.

ಪ್ರಕರಣ ಸಂಬಂಧ ಡಿಜಿಟಲ್​ ಸಾಕ್ಷ್ಯವನ್ನು ಇಡಿ ಈಗಾಗಲೇ ಸಂಗ್ರಹಿಸಿದೆ. ಪೂಜಾ ಸಿಂಘಾಲ್​ ಗಣಿಗಾರಿಕೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಮೇ 12 ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.

ಕುಂತಿ ಜಿಲ್ಲೆಗೆ ನೀಡಲಾಗಿದ್ದ ಮನ್ರೇಗಾ ಹಣವನ್ನು ದುರ್ಬಳಕೆ ಮಾಡಿದ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳೇ ಶಾಮೀಲಾಗಿದ್ದು, ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ.

2020ರಲ್ಲಿ ಸಣ್ಣ ಪ್ರಮಾಣದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಓರ್ವ ಇಂಜಿನಿಯರ್​ನನ್ನು ಬಂಧಿಸಿ, ಇಲ್ಲಿನ ಪೊಲೀಸರು ಕೈ ತೊಳೆದುಕೊಂಡಿದ್ದರು. ಇದೀಗ ದೊಡ್ಡ ಕುಳಗಳ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net