

ರಾಂಚಿ: ಹತ್ತು ಮತ್ತು ಹನ್ನೆರಡನೆ ತರಗತಿಯ ಬೋರ್ಡ್ ಎಕ್ಸಾಂನಲ್ಲಿ ಟಾಪರ್ಗಳಾಗುವ ಕನಸು ಅನೇಕ ವಿದ್ಯಾರ್ಥಿಗಳಲ್ಲಿರುತ್ತದೆ. ದುಬಾರಿ ಬಹುಮಾನ ಸಿಗುತ್ತದೆ ಎಂಬ ಕಾರಣಕ್ಕೆ ಟಾಪರ್ಗಳಾಗುತ್ತಾರಾ ವಿದ್ಯಾರ್ಥಿಗಳು?! ಟಾಪರ್ಗಳಾಗುವುದಕ್ಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಜಾರ್ಖಂಡ್ನ ಶಿಕ್ಷಣ ಸಚಿವರು ಕಂಡುಕೊಂಡ ದಾರಿ ಇದು!. ಹತ್ತು ಮತ್ತು ಹನ್ನೆರಡನೇ ತರಗತಿಯ ರಾಜ್ಯಮಟ್ಟದ ಟಾಪರ್ಗಳಿಗೆ ಅವರು ಕಾರುಗಳನ್ನು ಬಹುಮಾನವಾಗಿ ಕೊಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ನಡೆಸಿದ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ರಾಜ್ಯದಲ್ಲಿ ಟಾಪರ್ ಆದ ಇಬ್ಬರಿಗೆ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಅವರು ಕಾರುಗಳನ್ನು ಬುಧವಾರ ಬಹುಮಾನವಾಗಿ ನೀಡಿದ್ದಾರೆ. ಅಕಾಡೆಮಿಕ್ ಕೌನ್ಸಿಲ್ ಸೆಪ್ಟೆಂಬರ್ 18ರಂದು ಸ್ಟೇಟ್ ಟಾಪರ್ಗಳ ಹೆಸರನ್ನು ಪ್ರಕಟಿಸಿತ್ತು.
ಸುರಿಯಾ ಗಿರಿಡಿಹ್ನ ಎಸ್ಆರ್ಎಸ್ಎಸ್ಆರ್ ಹೈಸ್ಕೂಲ್ನ 12ನೇ ತರಗತಿ ವಿದ್ಯಾರ್ಥಿ ಅಮಿತ್ ಕುಮಾರ್ ರಾಜ್ಯಮಟ್ಟದ ಟಾಪರ್ (91.4%) ಆದರೆ, 10ನೇ ತರಗತಿ ಪರೀಕ್ಷೆಯಲ್ಲಿ ನೇತರಹಟ್ ರೆಸಿಡೆನ್ಶಿಯಲ್ ಸ್ಕೂಲ್ನ ಮನೀಷ್ ಕುಮಾರ್ ಕಟಿಯಾರ್ (98%) ಟಾಪರ್. ಇವರಿಬ್ಬರೂ ಕಾರುಗಳನ್ನು ಪಡೆದುಕೊಂಡಿದ್ದಾರೆ. ಮುಂದಿನ ವರ್ಷದಿಂದ ಯಾರು ಟಾಪರ್ಗಳಾಗುತ್ತಾರೋ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಅವರ ಉನ್ನತ ಶಿಕ್ಷಣ ಖರ್ಚುವೆಚ್ಚಗಳನ್ನು ಭರಿಸುವುದಾಗಿಯೂ ಶಿಕ್ಷಣ ಸಚಿವ ಜಗರ್ನಾಥ್ ಮಹತೋ(53) ಘೋಷಿಸಿದ್ದಾರೆ.
ಹತ್ತನೇ ತರಗತಿವರೆಗೆ ಓದಿದ್ದ ಶಿಕ್ಷಣ ಸಚಿವರು ಇತ್ತೀಚೆಗಷ್ಟೇ 11ನೇ ತರಗತಿ ಪ್ರವೇಶ ಪಡೆದುಕೊಂಡಿದ್ದಾರೆ. ಶಿಕ್ಷಣದ ಮಹತ್ವವನ್ನು ಸಾರುವ ಸಲುವಾಗಿ ಮುಂದಡಿ ಇರಿಸಿ ಗಮನಸೆಳೆದಿದ್ದಾರೆ. ಜಾರ್ಖಂಡ್ ಸರ್ಕಾರ ಜುಲೈ 22ರಂದು ಸಚಿವ ಸಂಪುಟ ಸಭೆಯಲ್ಲಿ 10 ಮತ್ತು 12 ನೇ ತರಗತಿಯ ಟಾಪರ್ಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ನೀಡುವ 22 ಪ್ರಸ್ತಾವನೆಗಳನ್ನು ಅಂಗೀಕರಿಸಿತ್ತು. (ಏಜೆನ್ಸೀಸ್)