ದೆಹಲಿಯಲ್ಲಿ ನಡೆಯಲಿದೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ

Suresh angadi
Published on

ಬೆಳಗಾವಿ: ನವದೆಹಲಿಯ ಏಮ್ಸ್​ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನಲ್ಲಿ ನಿನ್ನೆ ವಿಧಿವಶರಾದ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ ದೆಹಲಿಯ ಲೋಧಿರಸ್ತೆಯ ಚಿತಾಗಾರದಲ್ಲಿ ನಡೆಯಲಿದೆ. ಕರೊನಾ ಕಾರಣಕ್ಕೆ ಪಾರ್ಥಿವ ಶರೀರವನ್ನು ಊರಿಗೆ ಕೊಂಡೊಯ್ಯದಂತೆ ವೈದ್ಯರು ಸಲಹೆ ನೀಡಿದ ಕಾರಣ, ಕುಟುಂಬದ ಸದಸ್ಯರೂ ಅದಕ್ಕೊಪ್ಪಿ ದೆಹಲಿ ಕಡೆಗೆ ಪಯಣ ಬೆಳೆಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಯುವ ನಿರೀಕ್ಷೆ ಇದೆ. ಲಿಂಗಾಯತ ಧರ್ಮದ ವಿಧಿ ವಿಧಾನದ ಪ್ರಕಾರ ಬಾಳಯ್ಯ ಹಿರೇಮಠ ಮತ್ತು ಆಪ್ತ ಸಹಾಯಕರಾದ ಶ್ರೀಕಾಂತ್ ಕಟಕೋಳ, ರಂಗನಾಥ ದೇಶಪಾಂಡೆ, ರಾಜು ಜ್ಯೋಶಿ, ಸಂತೋಷ ತುಬಚಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಇವರೂ ದೆಹಲಿಗೆ ಹೊರಟಿದ್ದಾರೆ. ಹಿರಿಯ ಪುತ್ರಿ ಡಾ.ಸ್ಪೂರ್ತಿ ಪಾಟೀಲ, ಮೊಮ್ಮಗಳು ಸೇರಿ ಒಂಭತ್ತು ಕುಟುಂಬ ಸದಸ್ಯರು ಬೆಳಗಾವಿಯಿಂದ ವಿಮಾನ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸಿದ್ದಾರೆ.

ಶ್ರದ್ಧಾಂಜಲಿ ಸಭೆ: ನವದೆಹಲಿಯ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಸಭೆ ನಡೆಯಲಿದೆ. ಇದು ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗಿದ್ದು, ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಿಸುವಂತೆ ಸರ್ಕಾರ ಸೂಚನೆ ನೀಡಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net