

ಬೆಂಗಳೂರು: ಕಳೆದ ಆರು ತಿಂಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದ ನಟ ಧ್ರುವ ಸರ್ಜಾ, ಮತ್ತೆ ಸೆಟ್ಗೆ ಮರಳುತ್ತಿದ್ದಾರೆ. ‘ಪೊಗರು’ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಪೊಗರು’ ತಂಡ, ಈಗ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಎಚ್ಎಂಟಿ ಫ್ಯಾಕ್ಟರಿಯಲ್ಲಿ ಅದ್ಧೂರಿ ವೆಚ್ಚದ ಸೆಟ್ ನಿರ್ಮಾಣ ಕೆಲಸ ಈಗಾಗಲೇ ಶುರುವಾಗಿದ್ದು, ಆ ಸೆಟ್ ನಿರ್ವಣದ ವೆಚ್ಚವೇ ಬರೋಬ್ಬರಿ ಒಂದೂವರೆ ಕೋಟಿಯಂತೆ! ‘ಪೊಗರು ಅಣ್ಣನಿಗೆ ಪೊಗರು ...’ ಎಂಬ ಸಾಹಿತ್ಯವಿರುವ ಹಾಡಿಗೆ ಮುರಳಿ ಮಾಸ್ಟರ್ ಸ್ಟೆಪ್ ಹೇಳಿಕೊಡಲಿದ್ದು, ಸೆ. 25ರಿಂದ ಐದು ದಿನಗಳಲ್ಲಿ ಹಾಡಿನ ಚಿತ್ರೀಕರಣ ಮುಗಿಸಲಿದೆ ಚಿತ್ರತಂಡ. ಈ ಹಾಡಿನ ಜತೆಗೆ ಬಾಕಿ ಉಳಿದ ಕೆಲ ದೃಶ್ಯಗಳ ಚಿತ್ರೀಕರಣ ಮುಗಿದರೆ, ‘ಪೊಗರು’ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿದಂತೆ. ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿರುವ ನಿರ್ದೇಶಕ ನಂದಕಿಶೋರ್, ‘ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಐದು ದಿನಗಳಲ್ಲಿ ಹಾಡು ಮುಗಿದರೆ, ಇನ್ನು ಮೂರು ದಿನ ಕೆಲ ದೃಶ್ಯಗಳ ಚಿತ್ರೀಕರಣ ಮಾಡಿಕೊಳ್ಳಲಿದ್ದೇವೆ. ಆ ಕೆಲಸ ಮುಗಿದರೆ ಚಿತ್ರ ಪೂರ್ಣವಾಗಲಿದೆ. ಇತ್ತ ಚಿತ್ರೀಕರಣೋತ್ತರ ಕೆಲಸಗಳು ಕೊನೇ ಹಂತದಲ್ಲಿವೆ’ ಎನ್ನುತ್ತಾರೆ.
ಈಗಾಗಲೇ ‘ಪೊಗರು’ ಚಿತ್ರದ ‘ಖರಾಬು’ ಹಾಡು ಕನ್ನಡದ ಜತೆಗೆ ತೆಲುಗಿನಲ್ಲೂ ಮೋಡಿ ಮಾಡಿದೆ. ಮಿಲಿಯನ್ಗಟ್ಟಲೆ ಜನರಿಂದ ವೀಕ್ಷಣೆ ಪಡೆದಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಧನಂಜಯ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಸೇರಿ ಹಲವು ಸ್ಟಾರ್ ಕಲಾವಿದರ ದಂಡೇ ಇದೆ. ಬಿ.ಕೆ ಗಂಗಾಧರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.