

Trump: ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿ ಬಿತ್ತರಿಸಿದ್ದಾರೆಂದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವಿರುದ್ಧ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಫ್ಲೋರಿಡಾದ ದಕ್ಷಿಣ ಜಿಲ್ಲೆಯ ಫೆಡರಲ್ ಕೋರ್ಟ್ನಲ್ಲಿ 10 ಬಿಲಿಯನ್ ಡಾಲರ್ (ಸುಮಾರು 86,187 ಕೋಟಿ ರೂ.) ಪರಿಹಾರಕ್ಕಾಗಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
2003ರಲ್ಲಿ ಜೆಫ್ರಿ ಎಪ್ಸ್ಟೀನ್ 50ನೇ ಹುಟ್ಟುಹಬ್ಬಕ್ಕೆ ಡೊನಾಲ್ಡ್ ಟ್ರಂಪ್ ಅಶ್ಲೀಲ ಚಿತ್ರಗಳನ್ನೊಳಗೊಂಡ ಪತ್ರವನ್ನು ಕಳುಹಿಸಿದ್ದರು ಎಂದು ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆ ತಪ್ಪಾಗಿ ವರದಿ ಮಾಡಿದೆ. ನಾನು ಅಂತಹ ಯಾವುದೇ ಪತ್ರವನ್ನು ಕಳುಹಿಸಿಲ್ಲ. ದುರುದ್ದೇಶದಿಂದ ನನ್ನ ವಿರುದ್ಧ ಪಿತೂರಿ ಮಾಡಿ, ಮಾನಹಾನಿ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿ, ಪ್ರಕರಣ ದಾಖಲಿಸಿದ್ದಾರೆ.
ವಾಲ್ಸ್ಟ್ರೀನ್ ಜರ್ನಲ್ನ ಮಾತೃ ಕಂಪನಿ ನ್ಯೂಸ್ ಕಾರ್ಪ್, ಸ್ಥಾಪಕ ರೂಪರ್ಟ್ ಮರ್ಡೋಕ್, ವಾಲ್ಸ್ಟ್ರೀಟ್ ಜರ್ನಲ್ ಪಬ್ಲಿಷರ್ ಡೌ ಜೋನ್ಸ್ ಹಾಗೂ ಇಬ್ಬರು ವರದಿಗಾರರ ವಿರುದ್ಧ 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಯಾರು ಜೆಫ್ರಿ ಎಪ್ಸ್ಟೀನ್?
ಜೆಫ್ರಿ ಎಪ್ಸ್ಟೀನ್ ಅಮೆರಿಕದ ಕುಖ್ಯಾತ ಅಪರಾಧಿ. ಲೈಂಗಿಕ ದೌರ್ಜನ್ಯ ಸೇರಿದಂತೆ ಕಳ್ಳಸಾಗಾಣೆ ಆರೋಪಗಳು ಎಪ್ಸ್ಟೀನ್ ಮೇಲಿದೆ. ಅಷ್ಟೇ ಅಲ್ಲ, ಅಪ್ರಾಪ್ತ ಬಾಲಕಿಯರನ್ನು ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳ ಬಳಿ ಕಳುಹಿಸುತ್ತಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿವೆ. ಅನೇಕ ಮಹಿಳೆಯರು ಎಪ್ಸ್ಟೀನ್ ದೌರ್ಜನ್ಯದ ಬಗ್ಗೆ ಆರೋಪಿಸಿದ್ದಾರೆ.
ಎಪ್ಸ್ಟೀನ್ ಒಟ್ಟು 36 ಯುವತಿಯರ ಮೇಲೆ ಲೌಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಎರಡು ಪ್ರಕರಣದಲ್ಲಿ ತಪ್ಪಿತಸ್ಥ ಎಂದು 2008ರಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. 13 ತಿಂಗಳ ಬಳಿಕ ಎಪಸ್ಟೀನ್ ಜೈಲಿನಿಂದ ಬಿಡುಗಡೆಯಾಗಿದ್ದ. ಮತ್ತೆ 2019ರಲ್ಲಿ ಆತನನ್ನು ಬಂಧಿಸಲಾಗಿತ್ತು, ಇದೇ ವೇಳೆ ಅಮೆರಿಕಾದ ಜೈಲಿನಲ್ಲಿ ಎಪ್ಸ್ಟೀನ್ ಆತ್ಮಹತ್ಯೆಗೆ ಶರಣಾಗಿದ್ದ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).