

ಬೆಂಗಳೂರು: ಲೋಕಸಮರಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿಯನ್ನು ಘೋಷಿಸಿದ ಬಿಜೆಪಿ ಮತ್ತು ಜೆಡಿಎಸ್, ಸೀಟು ಹಂಚಿಕೆಯ ತೀರ್ಮಾನವನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಕರ್ನಾಟಕದ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 24 ಮತ್ತು ಜೆಡಿಎಸ್ 4 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ. ಆದರೆ, ಎರಡೂ ಪಕ್ಷದ ನಾಯಕರು ಈ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ. ಬಹುಶಃ ಮಾರ್ಚ್ ತಿಂಗಳಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಚುನಾವಣಾ ದಿನಾಂಕದ ಬಳಿಕ ಈ ಬಗ್ಗೆ ಉಭಯ ಪಕ್ಷದ ನಾಯಕರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ, ಹಾಸನ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಜೆಡಿಎಸ್‌ಗೆ 4 ಸ್ಥಾನ ಹಂಚಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ, ಮಂಡ್ಯ, ಹಾಸನ ಮತ್ತು ಚಿಕ್ಕಬಳ್ಳಾಪುರ ಹೊರತುಪಡಿಸಿ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೂ ಸ್ಪರ್ಧಿಸಲು ಪಕ್ಷವು ಆಸಕ್ತಿ ತೋರಿಸಿತ್ತು. ಆದರೆ, ಅಂತಿಮವಾಗಿ 4 ಕ್ಷೇತ್ರಗಳು ಜೆಡಿಎಸ್‌ಗೆ ಲಭಿಸಿವೆ. ಕರ್ನಾಟಕದ ಜನಸಂಖ್ಯೆಯ ಸುಮಾರು 16% ರಷ್ಟಿರುವ ಒಕ್ಕಲಿಗ ಮತವನ್ನು ಪರಿಗಣಿಸಿ ರಾಜ್ಯದ ರಾಜಕೀಯ ವಿಶ್ಲೇಷಕರು ಈ ಮೈತ್ರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೂಲಗಳ ಪ್ರಕಾರ ಜೆಡಿಎಸ್ ಕೋಟಾದಲ್ಲಿ ಇರುವ ಎಲ್ಲಾ ನಾಲ್ಕು ಕ್ಷೇತ್ರಗಳು ಒಕ್ಕಲಿಗರ ಭದ್ರಕೋಟೆಗಳಾಗಿವೆ.
ಒಕ್ಕಲಿಗರ ಮೇಲೆ ಜೆಡಿಎಸ್‌ಗೆ ಹಿಡಿತವಿದೆ. ಅಲ್ಲದೆ, ಪಕ್ಷದ ಮುಖ್ಯಸ್ಥ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೆ, ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರು ಪ್ರಬಲ ಒಕ್ಕಲಿಗ ನಾಯಕ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರು ತಮ್ಮ ಬೆಂಬಲವನ್ನು ವಿಭಜಿಸಿದ ಪರಿಣಾಮ ಜೆಡಿಎಸ್ ಮೇಲೆ ತೀವ್ರ ಪರಿಣಾಮ ಬೀರಿತು.
ಈ ಲೋಕಾಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಕ್ಕಲಿಗರು ಯಾವ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ಅವಲಂಬಿತವಾಗಿರುತ್ತದೆ. 2019ರ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಿಗೆ ಸ್ಪರ್ಧಿಸಿದಾಗ, ಎರಡೂ ಪಕ್ಷಗಳು ಭಾರಿ ನಿರಾಶೆಯನ್ನು ಎದುರಿಸಿದವು, ತಲಾ ಒಂದು ಸ್ಥಾನವನ್ನು ಮಾತ್ರ ಪಡೆದುಕೊಂಡವು. (ಏಜೆನ್ಸೀಸ್)