ಎನ್​ಡಿಎಗೆ ಜೆಡಿಎಸ್?; ವಿಲೀನಕ್ಕಿಂತ ಮೈತ್ರಿಕೂಟ ಸೇರಲು ಎಚ್​ಡಿಕೆ ಆಸಕ್ತಿ

JDS
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹಣಿಯುವ ಉದ್ದೇಶದಿಂದ ಬಿಜೆಪಿ ಜತೆ ಕೈಜೋಡಿಸಿ ಎನ್​ಡಿಎ ಮಿತ್ರಪಕ್ಷ ಆಗಲು ಬಯಸಿರುವ ಜೆಡಿಎಸ್ ಈ ಸಂಬಂಧ ಶೀಘ್ರ ನಿರ್ಧಾರ ಕೈಗೊಳ್ಳಲಿದೆ. ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಮುಗಿಸುವ ಕಾಂಗ್ರೆಸ್ ನಾಯಕರ ಕಾರ್ಯತಂತ್ರದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಪಕ್ಷವನ್ನು ಎನ್​ಡಿಎ ಜತೆ ಸೇರಿಸಲಿದ್ದಾರೆಂದು ಜೆಡಿಎಸ್​ನ ಉನ್ನತ ಮೂಲಗಳು ಖಚಿತಪಡಿಸಿವೆ. ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂದು ಇತ್ತೀಚೆಗೆ ಹರಿದಾಡಿದ್ದ ಸುದ್ದಿಗಳನ್ನು ಎಚ್ಡಿಕೆ ಅಲ್ಲಗಳೆದಿದ್ದರಾದರೂ ಯಾವುದೇ ರಾಜಕೀಯ ಬೆಳವಣಿಗೆಗಳು ಬೇಕಾದರೂ ನಡೆಯಬಹುದೆನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರು. ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿಲೀನದ ಬದಲಾಗಿ ಬಿಜೆಪಿಯ ಮಿತ್ರಪಕ್ಷವಾಗಿರುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್​ನ ಮತವಿಭಜನೆ ಕಾರಣದಿಂದಲೇ ವಿಲೀನಕ್ಕೆ ಬದಲಾಗಿ ಪಕ್ಷವನ್ನು ಉಳಿಸಿಕೊಂಡು ಬೆಳೆಸಲು ಎರಡೂ ಪಕ್ಷಗಳು ಈ ತೀರ್ವನಕ್ಕೆ ಬಂದಿವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಸ್ಥಾನಗಳು ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿರುವುದು ವಿಶ್ವಾಸ ಹೆಚ್ಚಿಸಿದೆ. ಎಚ್ಡಿಕೆ ಅವರ ಕಾಂಗ್ರೆಸ್ ವಿರುದ್ಧದ ಆಕ್ರೋಶಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಸಿದ್ದರಾಮಯ್ಯ ಅವರಾದರೆ, ಮತ್ತೊಂದು ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರರು. ಸಿದ್ದರಾಮಯ್ಯ ಬೆಂಬಲಿಗರಿಂದಲೇ ಸರ್ಕಾರ ಬಿದ್ದು ಹೋಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಪದೇಪದೆ ಕೆಣಕುತ್ತ ವಾಗ್ದಾಳಿ ಮಾಡುತ್ತಿದ್ದಾರೆ.

ಆದ್ದರಿಂದ ಬಿಜೆಪಿ ಜತೆ ಸೇರಿ ಕಾಂಗ್ರೆಸ್ಸನ್ನು ದುರ್ಬಲಗೊಳಿಸಿ ಉತ್ತರ ನೀಡಬೇಕು ಎಂಬುದು ಕುಮಾರಸ್ವಾಮಿ ಉದ್ದೇಶ. ಇದರ ಜತೆಗೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್​ನ ಜನಪ್ರತಿನಿಧಿಗಳು, ಪದಾಧಿಕಾರಿಗಳನ್ನು ಹೈಜಾಕ್ ಮಾಡಿ ಕಾಂಗ್ರೆಸ್​ಗೆ ಸೇರಿಸಿಕೊಂಡು ತಮ್ಮ ಸ್ವಕ್ಷೇತ್ರದಲ್ಲಿಯೇ ಹೊಸದಾಗಿ ಪಕ್ಷ ಕಟ್ಟುವ ಸ್ಥಿತಿಯನ್ನು ತಂದಿಟ್ಟಿರುವುದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ಮುಂದಿನ ಲೋಕಸಭಾ ಚುನಾವಣೆಗೂ ಇದೇ ಕ್ಷೇತ್ರದಿಂದ ಸ್ಪರ್ಧಿಸಬಾರದೇಕೆಂಬ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಲೆಕ್ಕಾಚಾರಗಳೇನು?

  • ವಿಲೀನಕ್ಕಿಂತ ಮಿತ್ರಪಕ್ಷವಾಗಿದ್ದರೆ ಗೌರವ ಹೆಚ್ಚು, ಪಕ್ಷದಲ್ಲಿ ಸೇರಿದರೆ ಹತ್ತರಲ್ಲಿ ಹನ್ನೊಂದು ಆಗಬೇಕಾಗುತ್ತದೆ
  • ಸ್ವಂತ ನಿರ್ಧಾರಗಳನ್ನು ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ
  • ಅಸ್ತಿತ್ವ ಸಹ ಉಳಿಯುವುದಿಲ್ಲ.
  • ಎನ್​ಡಿಎಯಲ್ಲಿ ಅವಮಾನವಾದರೆ ಹೊರಬರು ವುದಕ್ಕೆ ಅವಕಾಶ ಮುಕ್ತ
  • ಬಿಜೆಪಿಯ ರಾಜ್ಯ ನಾಯಕರಿಗಿಂತ ವರಿಷ್ಠರ ಜತೆ ಎಚ್ಡಿಕೆ ಸಂಬಂಧ ಉತ್ತಮವಾಗಿದೆ
  • ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಅಧಿಕಾರ ಸಿಗುವ ವಿಶ್ವಾಸ, ವಿಲೀನಕ್ಕಿಂತ ದೋಸ್ತಿ ಏರ್ಪಟ್ಟರೆ ಕಾಂಗ್ರೆಸ್ ಮತವಿಭಜನೆ ಸಾಧ್ಯ ಎಂಬುದು ಬಿಜೆಪಿ ವಿಶ್ವಾಸ

ಎಚ್​ಡಿಕೆಗೆ ಸಚಿವ ಸ್ಥಾನ?

ಮುಂದಿನ ವರ್ಷ ಜೂನ್​ನಲ್ಲಿ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಒಂದು ಸ್ಥಾನವನ್ನು ಜೆಡಿಎಸ್ ಸುಲಭವಾಗಿ ಗೆಲ್ಲಲಿದೆ. ಆ ಸ್ಥಾನಕ್ಕೆ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿ ಕೇಂದ್ರದಲ್ಲಿ ಸಚಿವರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ಮೂಲಗಳು ಹೇಳಿವೆ. ವಿಧಾನಸಭಾ ಚುನಾವಣೆ 2023ರಲ್ಲಿ ನಡೆಯಲಿದೆ. ಆದ್ದರಿಂದ ಒಂದು ವರ್ಷ ಕೇಂದ್ರ ಸಚಿವರಾಗಿ ಪಕ್ಷ ಸಂಘಟಿಸಿದರೆ ಎನ್​ಡಿಎ ಮೈತ್ರಿಕೂಟಕ್ಕೆ ಅನುಕೂಲವಾಗುತ್ತದೆ ಎಂದು ತಂತ್ರ ರೂಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಒಳಒಪ್ಪಂದ ಸಫಲ: ಕಾಂಗ್ರೆಸ್​ಗೆ ಪಾಠ ಕಲಿಸುವ ಸಲುವಾಗಿಯೇ ಆರ್​ಆರ್ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು. ಆ ಪ್ರಯತ್ನದಲ್ಲಿ ಸಫಲವಾದವು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಒಟ್ಟಾಗಿ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಉದ್ದೇಶ ಜೆಡಿಎಸ್ ಮುಗಿಸಬೇಕು ಎಂಬುದೇ ಆಗಿದೆ. ಆದ್ದರಿಂದಲೇ ಎಚ್ಚರಿಕೆಯ ಹೆಜ್ಜೆಯನ್ನಿಡಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net