

ಬೆಂಗಳೂರು: ತಾಜ್ ವೆಸ್ಟ್ ಎಂಡ್ ಹೋಟೆಲ್ ಹೆಸರನ್ನು ಉಲ್ಲೇಖಿಸಿ ಕಾಂಗ್ರೆಸ್ ಮಾಡಿರುವ ಪ್ರಶ್ನೆಗಳಿಗೆ ಜೆಡಿಎಸ್ ಪಕ್ಷ ಖಡಕ್ ತಿರುಗೇಟು ನೀಡಿದೆ.
ಜೆಡಿಎಸ್ ಅಧಿಕೃತ ಟ್ವಿಟರ್ ಖಾತೆಯಿಂದ ಅರಣಿ ಟ್ವೀಟ್ ಮಾಡಿದ್ದು, ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿಯಾಗಿದೆ. ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ಕಮೀಷನ್ ಕಾಂಗ್ರೆಸ್ನ ಹೊಸ ವರಸೆ ಮತ್ತು ಹೊಸ ಕಸವರಿಕೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ವೈಎಸ್ಟಿ ತೆರಿಗೆ ಬಗ್ಗೆ ಹೇಳಿ, ಕಾಸಿಗಾಗಿ ಹುದ್ದೆ ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟರೂ ಆ ಅಸಹ್ಯ ತನ್ನದಲ್ಲ ಎನ್ನುವ ಅವಿವೇಕ ಕಾಂಗ್ರೆಸ್ ಪಕ್ಷದ್ದು. ಆ ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ ಎಂಡ್ ಎನ್ನುವ ಸವಕಲು ವಿಷಯ ನೆನಪು ಮಾಡಿಕೊಂಡಿದೆ.
ವೆಸ್ಟ್ ಎಂಡ್ ಬಾಡಿಗೆ ಮಾತಿರಲಿ, ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ, ತೆಗೆದ ಫಸಲಿಗೆ ಲುಲು ಮಾಡಬಹುದಾ!? ಒಂದು ವೇಳೆ ಮಾಡಬಹುದಾದರೆ, ನಿಮ್ಮ ಲುಲುಕುಮಾರ್ಗಿಂತ ಬೆಸ್ಟ್ ಎಕನಾಮಿಸ್ಟ್ ಇನ್ನೊಬ್ಬರಿಲ್ಲ. ಹಾಗಿದ್ದರೆ ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ!?
ವೆಸ್ಟ್ ಎಂಡ್ ಲೆಕ್ಕ ಇರಲಿ, ಸಿಎಂ ಟಿಪ್ಪಣಿ ಬಿಕರಿಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, 3 ಟಿಪ್ಪಣಿ! ಇದ್ಯಾವ ಸೀಮೆ ಅರ್ಥಶಾಸ್ತ್ರ? ಕೌಟಿಲ್ಯನೂ ಬೆಚ್ಚಿಬೀಳುವ ಆಡಳಿತ ಹಾಗೂ ರಾಜನೀತಿ ಇದು. ಈ ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ ವೈಎಸ್ಟಿ ತೆರಿಗೆ ಹುಂಡಿಗೋ? ಇಲ್ಲೇ ಸಾಕ್ಷ್ಯ ಇದೆ. ಪಾಪ ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲ ಪಂಗನಾಮ ಎಂದು ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು ಎಚ್.ಡಿ.ಕುಮಾರಸ್ವಾಮಿ ಅವರೇ? ಅಲ್ಲೊಂದು ಖಾಯಂ ಅಡ್ಡ ತೆರೆದಿದ್ದೀರಿ ಅಂದರೆ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ? ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ, ಬಾಡಿಗೆ ಕಟ್ಟುತ್ತಿದ್ದೀರಾ? ಅಥವಾ "ಕೆಎಸ್ಟಿ" ಸಂಗ್ರಹದ ಹಣ ಬಳಸುತ್ತಿದ್ದೀರಾ? ಕೆಸ್ಟಿ ಕುಮಾರ್ ಅವರು ಉತ್ತರಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು.