More

    ಸದನದಲ್ಲಿ ಗ್ಯಾರಂಟಿ ಕದನ: ನಿಲುವಳಿ ಕುರಿತು ಚರ್ಚೆಗೆ ಪಟ್ಟು; ಕೈ ವಿರುದ್ಧ ಬಿಜೆಪಿ ಹೋರಾಟ

    ಬೆಂಗಳೂರು: ವಿಧಾನಸಭೆ ಅಧಿವೇಶನದ ಆರಂಭದಲ್ಲೇ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಜಿದ್ದಾಜಿದ್ದಿನ ಕಾಳಗ ಶುರುವಾಗಿದ್ದು, ಚುನಾವಣೆ ಸೋಲಿನ ಬಳಿಕ ಬಿಜೆಪಿ ಮೈಚಳಿ ಬಿಟ್ಟು ಹೋರಾಟಕ್ಕಿಳಿದಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ನಿಲುವಳಿ ಮಂಡಿಸಿದ್ದ ಬಿಜೆಪಿ, ಚರ್ಚೆಗೆ ಅವಕಾಶ ನೀಡುವಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್​ನಲ್ಲಿ ಪಟ್ಟು ಹಿಡಿದ ಪರಿಣಾಮ ಇಡೀ ದಿನದ ಕಲಾಪ ಗದ್ದಲದಲ್ಲೇ ಮುಳುಗಿಹೋಯಿತು.

    ಕಲಾಪದ ವೇಳಾಪಟ್ಟಿಯ ಪ್ರಕಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಬೇಕಿತ್ತು. ಗದ್ದಲದ ನಡುವೆ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ರಾಜ್ಯಪಾಲರಿಗೆ ವಂದನೆ ಸಲ್ಲಿಸುವ ನಿರ್ಣಯವನ್ನು ಮಂಡಿಸಿದರೆ, ಗೋಪಾಲಕೃಷ್ಣ ಬೇಳೂರು ಅನುಮೋದಿಸಿದರು. ಆದರೆ, ಚರ್ಚೆಯ ಆರಂಭಕ್ಕೆ ಪ್ರತಿಪಕ್ಷ ಸದಸ್ಯರು ಅವಕಾಶವನ್ನೇ ನೀಡಲಿಲ್ಲ.

    ಘೋಷಣೆ ಮೊರೆತ: ಗ್ಯಾರಂಟಿ ಯೋಜನೆ ಅನುಷ್ಠಾನದ ವಿಷಯದಲ್ಲಿ ಸರ್ಕಾರ ನುಡಿದಂತೆ ನಡೆಯಲಿಲ್ಲ, ಷರತ್ತುಗಳನ್ನು ಹಾಕಿ ಜನರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಘೋಷಣೆ ಹಾಕಿದರು. ಕಲಾಪ ಆರಂಭವಾದಾಗಿನಿಂದಲೂ ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿ ಪೂರ್ವ ನಿಗದಿತ ಚಟುವಟಿಕೆಗೆ ಅಡ್ಡಿಪಡಿಸಿದರು. ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೊಡಲೇಬೇಕೆಂದು ಪರಿಪರಿಯಾಗಿ ಪಟ್ಟುಹಿಡಿದರು. ಸರ್ಕಾರ ಯಾವುದೇ ಕಾರಣಕ್ಕೆ ಅವಕಾಶ ಕೊಡಲ್ಲ ಎಂದೇ ವಾದಿಸಿತು. ಇದರಿಂದ ದಿನದಲ್ಲಿ ಮೂರು ಬಾರಿ ಕಲಾಪ ಮುಂದೂಡಬೇಕಾಯಿತು. ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಆಡಳಿತ ಪಕ್ಷದ ಹಾಗೂ ಜೆಡಿಎಸ್ ಶಾಸಕರ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿ ಕೈತೊಳೆದುಕೊಂಡಿತು.

    ಸಂಧಾನ ಸಭೆ: ಭೋಜನ ವಿರಾಮದ ಬಳಿಕವೂ ಬಿಜೆಪಿ ಸದಸ್ಯರ ಹೋರಾಟ ಮುಂದುವರಿಸಿದ ಪರಿಣಾಮ ಸ್ಪೀಕರ್ ಯು.ಟಿ. ಖಾದರ್ ಕಲಾಪ ಮುಂದೂಡಿ ತಮ್ಮ ಕೊಠಡಿಯಲ್ಲಿ ಸಂಧಾನ ಸಭೆ ನಡೆಸಿದರಾದರೂ ಸಭೆ ಫಲಪ್ರದವಾಗಲಿಲ್ಲ. ಪುನಃ ಕಲಾಪ ಆರಂಭವಾದಾಗ ಸ್ಪೀಕರ್ ಅವರು ಗಮನ ಸೆಳೆಯುವ ಸೂಚನೆ ಪ್ರಕ್ರಿಯೆ ಕೈಗೆತ್ತಿಕೊಂಡರು. ಸ್ಪೀಕರ್ ತೀರ್ಮಾನ ಧರಣಿ ನಿರತರ ಕೆಂಗಣ್ಣಿಗೆ ಗುರಿಯಾಯಿತು. ನೀವು ಪಕ್ಷಪಾತ ಮಾಡುತ್ತಿದ್ದೀರಿ, ನೀವು ಕಾಂಗ್ರೆಸ್ ಪರ ನಿಲ್ಲುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ ಪ್ರಸಂಗವೂ ನಡೆಯಿತು. ಒಂದು ಹಂತದಲ್ಲಿ ಸ್ಪೀಕರ್ ವಿರುದ್ಧ ಘೋಷಣೆಯನ್ನೂ ಹಾಕಿದರು. ಸ್ಪೀಕರ್ ಖಾದರ್ ಸ್ಪಷ್ಟನೆ ನೀಡಿ, ಬಿಜೆಪಿ ಬೇಡಿಕೆಯನ್ನು ನಿರಂತರವಾಗಿ ತಳ್ಳಿಹಾಕುತ್ತಲೇ ಬಂದರು. ಮೊದಲು ನಿಲುವಳಿ ಸೂಚನೆ ಕೊಟ್ಟಿದ್ದು ಜೆಡಿಎಸ್, ಹೀಗಾಗಿ ಜೆಡಿಎಸ್ ಪ್ರಸ್ತಾಪವನ್ನು ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗಿದೆ. ಬಿಜೆಪಿ ಕೋರಿಕೆ ನಂತರ ಬಂದಿದ್ದರಿಂದ ಒಂದೇ ದಿನ ಎರಡು ನಿಲುವಳಿ ಸೂಚನೆಗೆ ಅವಕಾಶ ಕೊಡಲು ಸಾಧ್ಯವಿಲ್ಲ. ಒಂದು ವೇಳೆ ಅವಕಾಶ ಕೊಟ್ಟರೆ ಕೆಟ್ಟಪರಂಪರೆಗೆ ಅವಕಾಶ ಮಾಡಿಕೊಟ್ಟಂತೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಿಜೆಪಿ ಸಲ್ಲಿಸಿದ ನಿಲುವಳಿ ಸೂಚನೆ ಓದಿ, ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ಕೋರಿಕೆ ಸಲ್ಲಿಸಿ ಪ್ರಶ್ನೋತ್ತರ ಕಲಾಪಕ್ಕೂ ಅಡ್ಡಿಪಡಿಸುವುದು ಸರಿಯಲ್ಲ ಎಂದು ವಾದಿಸಿದರು. ಇಡೀ ಗದ್ದಲದ ನಡುವೆ ನಾಯಕರ ನಡುವೆ ಒಂದಷ್ಟು ವಾಗ್ಯುದ್ಧವೂ ನಡೆಯಿತು.

    ಅಧಿವೇಶನ ಒಂದು ವಾರ ವಿಸ್ತರಣೆ: ವಿಧಾನ ಮಂಡಲದ ಅಧಿವೇಶನವನ್ನು ಜುಲೈ 21ರವರೆಗೆ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಜುಲೈ 3ರಿಂದ ಜುಲೈ 14ರವರೆಗೆ ಅಧಿವೇಶನ ನಡೆಯುವುದೆಂದು ತೀರ್ವನಿಸಲಾಗಿತ್ತು. ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ನಿರ್ಧರಿಸಲಾಯಿತು ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ತಿಳಿಸಿದರು.

    ಜುಲೈ 5ರಂದು ಈಗಾಗಲೆ ಸ್ವೀಕರಿಸಿದ ವಿಧೇಯಕಗಳ ಮಂಡನೆ ಮಂಡಿಸುವುದು, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ, ಜುಲೈ 6ರಂದು ಬೆಳಗ್ಗೆ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಯವರು ಉತ್ತರ ನೀಡಲಿದ್ದಾರೆ. ಜುಲೈ 7ರಂದು 2023-24ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಜುಲೈ 10ರಿಂದ 19ರವೆಗೆ ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಜುಲೈ 20ರಂದು ಹಣಕಾಸು ವಿಧೇಯಕಗಳ ಅಂಗೀಕಾರವಿರಲಿದೆ ಎಂದು ತಿಳಿಸಿದರು.

    ಬಿಎಸ್​ವೈ ನೇತೃತ್ವದಲ್ಲಿ ಪ್ರತಿಭಟನಾ ಸಭೆ: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಬೇಷರತ್ತಾಗಿ ಗ್ಯಾರಂಟಿಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ವಿದ್ಯುತ್ ದರ ಹೆಚ್ಚಳವನ್ನು ಯಥಾಸ್ಥಿತಿಗೆ ತರಬೇಕು, 10 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಯಥಾವತ್ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರಲ್ಲದೆ, ಕಾಂಗ್ರೆಸ್ ಸುಳ್ಳು ಭರವಸೆ ನೀಡಿದೆ ಎಂದು ಘೋಷಣೆ ಹಾಕಿದರು. ಸಂಸದ ಡಿ.ವಿ. ಸದಾನಂದಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ಹಾಲಪ್ಪ ಆಚಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮಾಜಿ ಶಾಸಕ ಎನ್.ಮಹೇಶ್ ಸೇರಿ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.

    ಎಂಬಿಎ ಪದವೀಧರ, ಅಕೌಂಟ್​ನಲ್ಲಿ 20 ಲಕ್ಷ, ಆದ್ರೂ 150 ರೂ. ದಿನಗೂಲಿ ಕೆಲಸ: ಕೊನೆಗೂ ಸಿಕ್ಕಿಬಿದ್ದ ಕೊಲೆಗಾರ ಪ್ರಿಯಕರ

    ಉರುಳಿ ಬಿದ್ದ ಬೃಹತ್ ಬಂಡೆ, ಎರಡು ಕಾರು ಅಪ್ಪಚ್ಚಿ; ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts