More

    ಇಕ್ಕಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು; ಮಕ್ಕಳಿಗಿಲ್ಲ ಹಾಲಿನಪುಡಿ ಭಾಗ್ಯ

    |ಸ.ದಾ. ಜೋಶಿ ಕಲಬುರಗಿ

    ರಾಜ್ಯದ ಅಂಗನವಾಡಿಗಳಿಗೆ ಎಂಟು ತಿಂಗಳಿಂದ ಕೆನೆರಹಿತ ಹಾಲಿನ ಪುಡಿ ಸರಬರಾಜು ಬಂದ್ ಆಗಿದೆ. ಹೀಗಾಗಿ ಕಂದಮ್ಮಗಳ ಜತೆ ಮಾತೃಪೂರ್ಣ ಯೋಜನೆಯಡಿ ಬರುವ ಗರ್ಭಿಣಿಯರು ಮತ್ತು ಬಾಣಂತಿಯರು ಸಹ ಪೌಷ್ಟಿಕಾಂಶಯುಕ್ತ ಹಾಲಿನಿಂದ ವಂಚಿತರಾಗಿದ್ದಾರೆ. ಆದರೆ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದೆ.

    ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಪೂರಕವಾಗಿ ಆರು ವರ್ಷದೊಳಗಿನ ಮಕ್ಕಳಿಗೆಂದು ಅಂಗನವಾಡಿಗಳಿಗೆ ಕೆನೆರಹಿತ ಹಾಲು ಪುಡಿ ಪೂರೈಸಲಾಗುತ್ತದೆ. ಇದರೊಂದಿಗೆ ಮಾತೃಪೂರ್ಣ ಯೋಜನೆಯಡಿ ಆಯಾ ಅಂಗನವಾಡಿ ವ್ಯಾಪ್ತಿಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 67 ಸಾವಿರ ಅಂಗನವಾಡಿ ಕೇಂದ್ರಗಳಿವೆ. ಹಾಲಿನ ಪುಡಿ ವಿತರಣೆ ನಿಂತಿದ್ದರಿಂದ ಆರು ವರ್ಷದೊಳಗಿನ 36 ಲಕ್ಷ ಮಕ್ಕಳು, ಸುಮಾರು 7.50 ಲಕ್ಷ ಗರ್ಭಿಣಿ/ಬಾಣಂತಿಯರಿಗೆ ಇದರ ಲಾಭ ಸಿಗುತ್ತಿಲ್ಲ.

    ಮಕ್ಕಳಿಗೆ ಶನಿವಾರ, ಭಾನುವಾರ ಹೊರತುಪಡಿಸಿ ಪ್ರತಿನಿತ್ಯ 15 ಗ್ರಾಂ ಹಾಲಿನ ಪುಡಿ ಮತ್ತು ಗರ್ಭಿಣಿ/ಬಾಣಂತಿಯರಿಗೆ ತಲಾ 20 ಗ್ರಾಂ ಹಾಲಿನ ಪುಡಿ ಬಳಸಿ ಇದಕ್ಕೆ 10 ಗ್ರಾಂ ಸಕ್ಕರೆ ಬೆರೆಸಿ ಹಾಲು ತಯಾರಿಸಿ ಕೊಡಬೇಕು. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಜಾಸ್ತಿಯಿದೆ.

    ಕಳೆದ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಜಾನುವಾರುಗಳಲ್ಲಿ ಲಿಂಪಿಸ್ಕಿನ್ (ಚರ್ಮಗಂಟು) ರೋಗ ಕಾಣಿಸಿಕೊಂಡು ಹಾಲಿನ ಉತ್ಪನ್ನದ ಮೇಲೆ ಪೆಟ್ಟು ಬಿದ್ದಿತ್ತು. ಕಳೆದ ಬೇಸಿಗೆವರೆಗೂ ಈ ಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ಹಾಲು ಒಕ್ಕೂಟಗಳಿಗೆ ಹಾಲಿನ ಕೊರತೆಯಾಗಿ ಪುಡಿ ತಯಾರಿಕೆ ಕುಗ್ಗಿತ್ತು. ಆದರೀಗ ಸ್ಥಿತಿ ಸಹಜವಾಗಿದೆ. ಮೇಲಾಗಿ ಶಾಲೆಗೆ ಕೆನೆರಹಿತ ಹಾಲಿನ ಪುಡಿ ವಿತರಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ವಿತರಿಸಲು ಏನು ತೊಂದರೆ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕು.

    ಕಾರ್ಯಕರ್ತೆಯರಿಗೂ ಕಿರಿಕ್: ಡಿಸೆಂಬರ್​ನಿಂದ ನಮ್ಮ ಅಂಗನವಾಡಿಗೆ ಹಾಲಿನ ಪುಡಿ ಬರುತ್ತಿಲ್ಲ. ಮಕ್ಕಳು ಮತ್ತು ಮನೆಯವರು ಹಾಲಿನ ಪುಡಿ ಬಗ್ಗೆ ನಿತ್ಯವೂ ಕೇಳುತ್ತಿದ್ದಾರೆ. ಸರ್ಕಾರ ಬೇಗ ಹಾಲಿನ ಪುಡಿ ವಿತರಿಸಿ ನಮ್ಮನ್ನು ಕಿರಿಕಿರಿಯಿಂದ ಪಾರುಮಾಡಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.

    ಅಂಗನವಾಡಿ ಮಕ್ಕಳಿಗೆ ಹಾಲಿನ ಪುಡಿ ವಿತರಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಶೀಘ್ರವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರನ್ನು ಭೇಟಿಯಾಗಿ ರ್ಚಚಿಸಲಾಗುವುದು. ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿ ಅಪೌಷ್ಟಿಕ ಸಮಸ್ಯೆ ಹೆಚ್ಚಿದೆ. ಈ ಭಾಗಕ್ಕೆ ಹಾಲಿನ ಪುಡಿ ವಿತರಣೆ ಅಗತ್ಯ.

    | ಶಶಿಧರ ಕೋಸಂಬೆ, ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ

    2ಜಿ ಮೊಬೈಲ್​ನಲ್ಲಿ ಸವಾಲಾಗಿದೆ ಸರ್ವೆ

    | ಎಚ್.ಆರ್.ದೇವರಾಜ್ ಕಡೂರು

    ನಾಲ್ಕು ವರ್ಷಗಳ ಹಿಂದೆ 25ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಡಿಜಿಟಲೀಕರಣಗೊಳಿಸಬೇಕೆಂಬ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಮೊಬೈಲ್​ಗಳು ಈಗ ಉಪಯೋಗದ ಸಾಮರ್ಥ್ಯ ಕಳೆದುಕೊಂಡಿವೆ. ಹೀಗಿರುವಾಗ ಆರೋಗ್ಯ ಇಲಾಖೆ ಪ್ರತಿ ಕುಟುಂಬದ ಆರೋಗ್ಯ ಸರ್ವೆ ಮಾಡುವಂತೆ ಸೂಚನೆ ನೀಡಿರುವುದು ಸವಾಲಾಗಿ ಪರಿಣಮಿಸಿದೆ.

    ಸರ್ಕಾರ ನೀಡಿದ 2ಜಿ ಮೊಬೈಲ್​ಗಳು ಸಮರ್ಪಕವಾಗಿರದ ಕಾರಣ ಅಂಕಿಅಂಶಗಳನ್ನು ಸ್ವಂತ ಫೋನ್​ನಿಂದ ನೋಂದಾಯಿಸಿ ನಿಭಾಯಿಸುತ್ತಿದ್ದರು. ಈಗ ಕಾರ್ಯಕರ್ತೆಯರಿಗೆ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಯ ಒತ್ತಡವನ್ನೂ ಹೇರುತ್ತಿರುವುದರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

    ರಾಜ್ಯ ಸರ್ಕಾರದ ಹಲವು ಇಲಾಖೆಗಳಿಂದ ಯಾವುದೇ ಸಮೀಕ್ಷೆ ನಡೆಸಿದರೂ ಎಲ್ಲವೂ ಆನ್​ಲೈನ್ ಆಗಿರುವುದರಿಂದ ಸಮರ್ಥ ಮೊಬೈಲ್ ಇರಲೇಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ 2ಜಿ ಸ್ಪೀಡ್ ಮೊಬೈಲ್​ಗಳನ್ನು ನಾಲ್ಕೈದು ವರ್ಷ ಕಳೆದರೂ ಬದಲಾಯಿಸಿಲ್ಲ. ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಳೇ ಮೊಬೈಲ್​ಗಳನ್ನೇ ಇಟ್ಟುಕೊಂಡು ಸಮೀಕ್ಷೆಗೆ ಇಳಿದಿದ್ದಾರೆ. ಅಧಿಕಾರಿಗಳು ಮಾತ್ರ ಆದಷ್ಟು ಬೇಗ ಸಮೀಕ್ಷೆ ಮುಗಿಸಿ ಎಂದು ಬೆನ್ನುಬಿದ್ದಿದ್ದಾರೆ.

    ಆಪ್ ಡೌನ್​ಲೋಡ್ ಆಗಲ್ಲ: ಗ್ರಾಮೀಣ ಭಾಗದಲ್ಲಿ ನೆಟ್​ವರ್ಕ್ ಸಮಸ್ಯೆಯಿರುವುದು ಒಂದೆಡೆಯಾದರೆ, ಸರ್ಕಾರ ನೀಡಿರುವ ಮೊಬೈಲ್​ನಲ್ಲಿ ರ್ಯಾಮ್ ಸ್ಟೋರೆಜ್ ಸ್ಪೇಸ್, ಇಂಟರ್​ನೆಟ್ ಕಡಿಮೆ ಇರುವುದರಿಂದ ಹೊಸ ಆಪ್​ಗಳನ್ನು ಡೌನ್​ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆಯ ಪೋಷಣ್ ಅಭಿಯಾನ ಮತ್ತಿತರ ಚಟುವಟಿಕೆಗಳ ಆಪ್ ಡೌನ್​ಲೋಡ್ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಮೊಬೈಲ್ ಫೋನ್​ಗಳು ಹ್ಯಾಂಗ್ ಆಗುತ್ತಿವೆ. ಬಹುತೇಕ ಫೋನ್​ಗಳಲ್ಲಿ ಬ್ಯಾಟರಿ ಸಮಸ್ಯೆ ತಲೆದೋರಿದ್ದು, ಆಪ್​ಗಳ ಸರಾಗ ಚಲನೆ ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತೆಯರು ಸ್ವಂತ ಮೊಬೈಲ್​ಗಳಲ್ಲೇ ಇಲಾಖೆಯ ಕೆಲಸ ಮಾಡುತ್ತಿದ್ದಾರೆ.

    ವಿರೋಧ ಏಕೆ?: ಕಾರ್ಯಕರ್ತೆಯರಿಗೆ ಜನರ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ವಹಿಸಲಾಗಿದ್ದು, ಕುಟುಂಬದ ಸದಸ್ಯರ ವೈಯಕ್ತಿಕ ವಿಚಾರವನ್ನು ಕೇಳಬೇಕಾದ್ದರಿಂದ ಒಂದು ಮನೆಗೆ ಕನಿಷ್ಠ 1 ಗಂಟೆ ಸಮಯಾವಕಾಶ ತೆಗೆದುಕೊಳ್ಳಲಿದೆ. ಒಂದು ಅಂಗನವಾಡಿಯಿಂದ ಕನಿಷ್ಠ 150 ಮನೆ ಸಮೀಕ್ಷೆ ನಡೆಸಲು 3 ವಾರಗಳಂತೂ ಬೇಕು. ಆದ್ದರಿಂದ ಸಮೀಕ್ಷೆ ಮಾಡಲೇಬೇಕಿದ್ದರೆ 3 ವಾರ ಅಂಗನವಾಡಿ ಕೆಲಸದಿಂದ ವಿನಾಯಿತಿ ಬೇಕು ಎಂಬುದು ಕಾರ್ಯಕರ್ತೆಯರ ಬೇಡಿಕೆ.

    ಅಂಗನವಾಡಿ ಕಾರ್ಯಕರ್ತೆಯರು ಕಳಪೆ ಮೊಬೈಲ್​ಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಜತೆಗೆ ಆರೋಗ್ಯ ಇಲಾಖೆಯ ಸಮೀಕ್ಷಾ ಕಾರ್ಯದ ಒತ್ತಡದಿಂದ ಹೈರಾಣಾಗುತ್ತಿದ್ದಾರೆ.

    | ಬಿ.ಅಮ್ಜದ್ ಅಧ್ಯಕ್ಷ, ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್

    2019ರಲ್ಲಿ ನೀಡಿದ್ದ ಮೊಬೈಲ್ ಹಾಳಾಗಿರುವ ಬಗ್ಗೆ ಪರಿಶೀಲಿಸಿ ವಾಪಸ್ ಪಡೆದುಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಿದೆ.

    | ಡಾ. ಕೆ.ಅನುರಾಧಾ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು

    ಹನಿಮೂನ್ ಪೀರಿಯಡ್​ನಲ್ಲೇ ಹೀಗಾದರೆ ಮುಂದಿನ ಕಥೆ ಏನು: ಎಚ್​.ಡಿ. ಕುಮಾರಸ್ವಾಮಿ

    ಮೇಕೆಯನ್ನು ಕೊಂದ ವ್ಯಕ್ತಿಯನ್ನು ಬಲಿ ತೆಗೆದುಕೊಂಡ ಆಡಿನ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts