

ರಾಂಚಿ: ಭೂ ಹಗರಣ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಮಧ್ಯಂತರ ಜಾಮೀನು ನೀಡಲು ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಶನಿವಾರ ನಿರಾಕರಿಸಿದೆ.
ತನ್ನ ಚಿಕ್ಕಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೊರೇನ್ 13 ದಿನಗಳ ಮಧ್ಯಂತರ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ.
ಕಳೆದ ಬುಧವಾರ ಹೇಮಂತ್ ಸೊರೆನ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತು ಜಾರ್ಖಂಡ್ ಹೈಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದ್ದರೂ ತೀರ್ಪು ಇನ್ನೂ ನೀಡಿಲ್ಲ ಎಂದು ಸೂರೆನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಎಸ್ಸಿ ಪೀಠಕ್ಕೆ ತಿಳಿಸಿದ್ದರು. ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದರು.
ಸುಮಾರು 600 ಕೋಟಿ ರೂ. ಮೊತ್ತದ ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದಡಿ ಹೇಮಂತ್ ಸೂರೇನ್ ಅವರನ್ನು ಜಾರಿ ನಿರ್ದೇಶನಾಲಯ ಜನವರಿಯಲ್ಲಿ ಬಂಧಿಸಿತ್ತು.
ಅಧಿಕೃತ ಭೂ ದಾಖಲೆಗಳನ್ನು ತಿರುಚಿ ಭೂಮಿಯನ್ನು ಮಾರಾಟಗಾರರು ಖರೀದಿದಾರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ, ಈ ಮೂಲಕ ಕೋಟ್ಯಂತರ ರೂಪಾತಿ ಮೌಲ್ಯದ ಭೂಮಿಯನ್ನು ಸ್ವಾಧೀನ ಪಡೆಯಲಾಗಿದೆ ಎಂಬುದು ಜಾರಿ ನಿರ್ದೇಶನಾಲಯ ಆರೋಪವಾಗಿದೆ.