More

    ನಾವು ಕೇಳುತ್ತಿರುವುದು ಕನ್ನಡಿಗರ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ: ಡಿ.ಕೆ. ಶಿವಕುಮಾರ್

    ಬೆಂಗಳೂರು: ಬರ ಪರಿಹಾರ ಬಿಡುಗಡೆ ವಿಚಾರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡುವಿನ ಹಗ್ಗ ಜಗ್ಗಾಟ್ಟಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಬರ ಪರಿಹಾರ ವಿಚಾರವಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ ಕೇಂದ್ರ ಸರ್ಕಾರವು 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. 

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ನಾವು ಕೇಳುತ್ತಿರುವುದು ಕನ್ನಡಿಗರ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ರಾಜ್ಯ ಸರ್ಕಾರ ಕೇಳಿದ ₹18,172 ಕೋಟಿ ಬರಪರಿಹಾರದಲ್ಲಿ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ಬಿಡುಗಡೆ ಮಾಡುವ ಮೂಲಕ ಕನ್ನಡಿಗರು ಹಾಗೂ ಕರ್ನಾಟಕದ ರೈತರ ಮೇಲಿರುವ ತನ್ನ ದ್ವೇಷವನ್ನು ಮತ್ತೆ ನಿರೂಪಿಸಿದೆ. ರಾಜ್ಯದ ರೈತರು ಹಾಗೂ ಕನ್ನಡಿಗರ ಸ್ವಾಭಿಮಾನದ ರಕ್ಷಣೆಗಾಗಿ ಕಾಂಗ್ರೆಸ್‌ ಸರ್ಕಾರ ಎಷ್ಟೇ ದೊಡ್ಡ ಸವಾಲುಗಳನ್ನಾದರೂ ಸ್ವೀಕರಿಸಲು ಸಿದ್ಧವಿದೆ. ನಾವು ಕೇಳುತ್ತಿರುವುದು ಕನ್ನಡಿಗರ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಕಲ್ಕತ್ತಾ ವಿರುದ್ಧ ಅಬ್ಬರಿಸಿದ ಪಂಜಾಬ್​ ಬ್ಯಾಟ್ಸ್​ಮನ್​ಗಳು; ಶಾರುಖ್​ ಪುತ್ರನ ರಿಯಾಕ್ಷನ್​ ವೈರಲ್

    ನಮ್ಮ ಹೋರಾಟ ಮುಂದುವರಿಯಲಿದೆ

    ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂ ಕೋರ್ಟ್​​ಗೆ ಧನ್ಯವಾದಗಳು. ಎನ್ ಡಿ ಆರ್ ಎಫ್ ನಿಯಮವಾಳಿ ಪ್ರಕಾರ ರಾಜ್ಯಕ್ಕೆ ರೂ.18,171 ಕೋಟಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ರೂ. 3498.98 ಕೋಟಿಗೆ ಅನುಮೋದನೆ ನೀಡಿ, ರೂ. 3,454 ಕೋಟಿ ಬಿಡುಗಡೆ ಮಾಡಿದೆ. ಬರಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ.

    ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ನಾವು 13-9-2023ರಂದು ಘೋಷಿಸಿದ್ದೆವು. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ 35,162 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ನಾವು ಪರಿಹಾರ ಕೇಳಿರುವುದು ಹೆಚ್ಚು ಕಡಿಮೆ ಅದರ ಅರ್ಧದಷ್ಟು. ಅಂದರೆ ರೂ.18,171 ಕೋಟಿ. ಉಳಿದ ಹಣವನ್ನು ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೆ ಭರಿಸುತ್ತಿದೆ. ಈಗ ಬಿಡುಗಡೆಯಾಗಿರುವುದು ರೂ.3,454 ಕೋಟಿ ಮಾತ್ರ. ಉಳಿದ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts