More

    ಕರ್ತವ್ಯ ಲೋಪ ಎಸಗಿದ ಪಿಡಿಒ ಅಮಾನತು

    ಕನಕಪುರ
    ತಾಲೂಕಿನ ಕಸಬಾ ಹೋಬಳಿಯ ಅಳ್ಳಿಮಾರನಹಳ್ಳಿ ಪಿಡಿಒ ಹನುಮಪ್ಪ ರೇಣಿ ಅವರನ್ನು ಅಮಾನತು ಮಾಡಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಆದೇಶಿಸಿದ್ದಾರೆ.

    ನಗರದ ಕೋಡಿಹಳ್ಳಿ ಹೋಬಳಿಯ ಅರಕೆರೆ ಗ್ರಾಪಂನಿಂದ ಅಳ್ಳಿಮಾರನಹಳ್ಳಿ ಗ್ರಾಪಂಗೆ ನಿಯೋಜನೆಗೊಂಡಿದ್ದ ಹನುಮಪ್ಪ ರೇಣಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ಗ್ರಾಪಂ ಕೇಂದ್ರದಲ್ಲಿ ಗೈರಾಗಿದ್ದರು. ಅಲ್ಲದೇ ಗ್ರಾಪಂ ಕರ್ತವ್ಯದ ವೇಳೆಯೂ ಕಚೇರಿಗೆ ಹಾಜರಾಗುತ್ತಿರಲಿಲ್ಲ.

    ಬರ ನಿರ್ವಹಣೆ, ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪುರಸ್ಕೃತ ಯೋಜನೆಗಳ ಅನುಷ್ಠಾನಗೊಳಿಸಲು ಸಾಧ್ಯವಾಗದೆ ಇರುವ ಆರೋಪ ಇವರ ಮೇಲಿತ್ತು. ಇಲಾಖೆಯಿಂದ ಈ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ನಂತರವೂ ಗ್ರಾಪಂ ಕಚೇರಿ ಕರ್ತವ್ಯಕ್ಕೆ ವಿಳಂಬವಾಗಿ ಹಾಜರಾಗಿದ್ದರು.

    ಇದರಿಂದ ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಆರೋಪಗಳ ಮೇರೆಗೆ 1957ರ ನಿಯಮ 10(1)(ಡಿ)ರ ಉಪನಿಯಮದಂತೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈಗಾಗಲೇ ಅವರ ವಿರುದ್ಧ ಇಲಾಖಾ ತನಿಖೆ ಬಾಕಿ ಇರಿಸಿ, ರಾಮನಗರ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅಮಾನತು ಆದೇಶ ಹೊರಡಿಸಿದ್ದಾರೆ.

    ಅಮಾನತಾದ ಅವಧಿಯಲ್ಲಿ ಕಾರ್ಯಾಲಯದ ಪರವಾನಗಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡುವ ಹಾಗಿಲ್ಲ ಎಂದೂ ಸೂಚನೆ ನೀಡಿದ್ದಾರೆ.
    ಸಮಾಧಾನ ತಂದಿದೆ: ಅಮಾನತಾಗಿರುವ ಪಿಡಿಒ ಹನುಮಪ್ಪ ರೇಣಿ ವಿರುದ್ಧ ಅಕ್ರಮಗಳ ಬಗ್ಗೆ ದೂರು ನೀಡಿದ್ದರೂ ಇಲಾಖೆಯಿಂದ ಕ್ರಮಕೈಗೊಂಡಿರಲಿಲ್ಲ. ತಡವಾಗಿಯಾದರೂ ಅಮಾನತುಗೊಳಿಸಿರುವುದು ಜನರಿಗೆ ಸಮಾಧಾನ ತಂದಿದೆ ಎಂದು ಕೆಆರ್‌ಎಸ್ ಪಕ್ಷದ ಮುಖಂಡ ಹೊಸದುರ್ಗ ಪ್ರಶಾಂತ್ ತಿಳಿಸಿದರು.

    ಹನುಮಪ್ಪ ರೇಣಿ ವಿರುದ್ಧ ಲಂಚ ಪ್ರಕರಣ ಸೇರಿ ಪ್ರತ್ಯೇಕ ಎರಡು ಪ್ರಕರಣಗಳು ಲೋಕಾಯುಕ್ತದಲ್ಲೂ ದೂರು ನೀಡಲಾಗಿದೆ. ಈಗಾಗಲೇ ಇವರ ವಿರುದ್ಧ ಇಲಾಖೆಗೆ ನೀಡಿರುವ ದೂರುಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು.
    ಕುಮಾರಸ್ವಾಮಿ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts