ಹಿಂದೂ ಸಂಘಟನೆಗಳ ಕಾರ್ಯಕರ್ತರು ಗತಿಯಿಲ್ಲದ ಭಿಕ್ಷುಕರು: ಕಾಂಗ್ರೆಸ್​ ಶಾಸಕ ರಾಜು ಕಾಗೆ

Raju Kaage
Published on

ಬೆಳಗಾವಿ: ರಾಜ್ಯದಲ್ಲಿ ಲೋಕಸಭೆಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೀಗ ಕಾಗವಾಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಾಜು ಕಾಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಪರ ಕಾಗವಾಡದ ಜುಗುಳದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಶಾಸಕ ರಾಜು ಕಾಗೆ, ರಾಮಮಂದಿದ ನಿರ್ಮಾಣದಿಂದ ದೇಶದ ಜನರು ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಿದರೆ ನಾವು ದೇವಸ್ಥಾನಗಳನ್ನು ನಿರ್ಮಿಸುತ್ತೇವೆ ಎಂದಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಜೈ ಶ್ರೀರಾಮ್​ ಘೋಷಣೆ ಕೂಗುವುದು ಮಾತ್ರ ಗೊತ್ತಿದೆ. ನಾನು ಇದನ್ನೆಲ್ಲಾ 40 ವರ್ಷಗಳ ಹಿಂದೆಯೇ ಮಾಡಿದ್ದೇನೆ. ನಾನು ಹಿಂದೂ ಸಂಘಟನೆಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದನಿದ್ದೇನೆ. ಆದರೆ, ನನ್ನ ಲೆವೆಲ್​ಗೆ ಅವರು ಸರಿ ಹೋಗುವುದಿಲ್ಲ. ಅವರು ಬಿ​ಕಾರ್​ಚೋಟ್​ಗಳು (ಗತಿ ಇಲ್ಲದ ಭಿಕ್ಷುಕರು), ಹೀಗಾಗಿ ಜನರು ಅಭಿವೃದ್ಧಿ ಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಹೇಳಿದ್ದಾರೆ.

ಇತ್ತ ಕಾಂಗ್ರೆಸ್​ ಶಾಸಕ ರಾಜು ಕಾಗೆ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಬಿಜೆಪಿ ನಾಯಕರು ಇವರ ಹೇಳಿಕೆಯನ್ನು ಖಂಡಿಸಿದ್ದಾರೆ. ಕೆಲ ದಿನಗಳ ಹಿಂದೆ ಮೋದಿ ಸತ್ತರೆ ಮುಂದೇ ಯಾರೂ ಪ್ರಧಾನಿ ಆಗೋದೆ ಇಲ್ವಾ ಎಂದು ಹೇಳುವ ಮೂಲಕ ಶಾಸಕ ರಾಜು ಕಾಗೆ ವಿವಾದದ ಕಿಡಿ ಹೊತ್ತಿಸಿದ್ದರು. ಇದೀಗ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕುರಿತು ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಇದು ಕಾಂಗ್ರೆಸ್​ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net