More

    ಸಜ್ಜನರ ಸಹವಾಸದ ಫಲ

    Sujatha Kulkarni Chabbi | ಸುಜಾತಾ ಕುಲಕರ್ಣಿ ಛಬ್ಬಿ
    ಒಂದು ಸಾರಿ ನಾರದನು ಶ್ರೀಕೃಷ್ಣನ ಬಳಿ ಕೇಳಿದನು- ‘ಸಜ್ಜನರ ಸಂಗದಿಂದ ಯಾವ ಫಲವುಂಟಾಗುವುದು?’. ಅದಕ್ಕೆ ಕೃಷ್ಣನು ‘ಇಲ್ಲಿಂದ ಪೂರ್ವ ದಿಕ್ಕಿಗೆ ಒಂದು ತಿಪ್ಪೆಯ ರಾಶಿ ಸಿಗುವವರೆಗೆ ಸಾಗು. ಅಲ್ಲಿ ಒಂದು ಸಗಣಿಯ ಹುಳವಿದೆ. ಅದರ ಬಳಿ ಈ ಪ್ರಶ್ನೆ ಕೇಳು’ ಎಂದನು. ಕೃಷ್ಣನ ಆಜ್ಞೆಯ ಮೇರೆಗೆ ನಾರದನು ಆ ಸಗಣಿಯ ಹುಳುವಿನ ಹತ್ತಿರ ಹೋಗಿ ‘ಸಜ್ಜನರ ಸಂಗದ ಫಲ ಯಾವುದು?’ ಎಂದು ಕೇಳಿದನು. ಕೂಡಲೇ ಆ ಸಗಣಿ ಹುಳವು ಸತ್ತುಹೋಯಿತು.

    ಇದರಿಂದ ನಾರದನಿಗೆ ಖೇದವುಂಟಾಗಿ, ಕೃಷ್ಣನಿದ್ದಲ್ಲಿಗೆ ಬಂದು ನಡೆದ ಸಂಗತಿಯನ್ನು ವಿವರಿಸಿದನು. ಆಗ ಕೃಷ್ಣನು ‘ಇಲ್ಲಿಂದ ಉತ್ತರ ದಿಕ್ಕಿನತ್ತ ಸಾಗು. ಅಲ್ಲಿ ಒಂದು ಪುರಾತನ ದೇವಾಲಯವಿದೆ. ಅದರ ವಠಾರದಲ್ಲಿ ಗೂಡನ್ನು ಕಟ್ಟಿಕೊಂಡು ಒಂದು ಪಾರಿವಾಳವು ವಾಸಿಸುತ್ತಿದೆ. ಅದರ ಹತ್ತಿರ ಈ ಪ್ರಶ್ನೆ ಕೇಳು’ಎಂದನು. ಅದರಂತೆ ನಾರದ ಆ ದೇವಾಲಯಕ್ಕೆ ಹೋದನು. ಅಲ್ಲಿ ಒಂದು ಪಾರಿವಾಳವು ಕುಳಿತಿತ್ತು. ನಾರದನು, ‘ಸಜ್ಜನರ ಸಂಗದಿಂದ ಏನು ಲಭಿಸುತ್ತದೆ’ ಎಂದು ಕೇಳಿದೊಡನೆ ಪಾರಿವಾಳವು ಪಟಪಟನೆ ರೆಕ್ಕೆ ಬಡಿಯುತ್ತ ಮೇಲಕ್ಕೆ ಒಂದು ಬಾರಿ ಹಾರಿ ನಾರದನ ಪಾದದ ಬಳಿ ಸತ್ತು ಬಿದ್ದಿತು.

    ತಾನು ವ್ಯರ್ಥವಾಗಿ ಎರಡು ಜೀವಿಗಳ ಮರಣಕ್ಕೆ ಕಾರಣನಾದೆನೆಂದು, ನೊಂದುಕೊಂಡು ನಾರದನು ಹಿಂತಿರುಗಿ, ‘ಪರಮಾತ್ಮಾ, ನೀನು ಹೇಳಿದಂತೆ ಹೋಗಿ, ಸಮಸ್ಯೆಯನ್ನು ಹೇಳಿದೊಡನೆ ಅವು ಸತ್ತು ಬೀಳುತ್ತಿವೆ. ನನ್ನ ಸಮಸ್ಯೆಗೆ ಪರಿಹಾರ ದೊರೆಯಲೇ ಇಲ್ಲ’ಎಂದನು. ‘ದಕ್ಷಿಣದ ದಾರಿಯಲ್ಲಿ ಒಂದು ಅರಮನೆಯಿದೆ. ಅಲ್ಲಿಯ ರಾಜನಿಗೆ ಈಗಷ್ಟೇ ಪುತ್ರ ಜನನವಾಗಿದೆ. ಅಲ್ಲಿಗೆ ಹೋಗಿ ಆ ಶಿಶುವಿಗೆ ಪ್ರಶ್ನೆ ಕೇಳು’ ಎಂದು ಕೃಷ್ಣನು ಹೇಳಿದನು. ಆಗ ನಾರದನು ‘ಬೇಡ ದೇವಾ, ಮೊದಲಿನ ಘಟನೆಗಳಂತೆ ಆ ಹಸುಗೂಸಿನ ನಿಧನವಾದರೆ ನಾನು ಸಹಿಸಲಾರೆ’ಎಂದಾಗ, ‘ನಿಶ್ಚಿಂತನಾಗಿ ಅಲ್ಲಿಗೆ ಹೋಗು’ಎಂದು ಕೃಷ್ಣ ಹೇಳಿದ.

    ನಾರದನು ರಾಜಕುವರನ ತೊಟ್ಟಿಲ ಪಕ್ಕದಲ್ಲಿ ನಿಂತು, ‘ಸಜ್ಜನರ ಸಂಗದಿಂದ ಯಾವ ಫಲವುಂಟಾಗುವುದು?’ ಎಂದು ಕೇಳಿದನು. ಆ ಹಸುಗೂಸು ಒಮ್ಮಿಂದೊಮ್ಮೆಲೆ ತೊಟ್ಟಿಲಿನಿಂದ ಕೆಳಗೆ ಹಾರಿತು. ಆದರೆ ನಾರದ ಎಣಿಸಿದಂತೆ ಮೃತನಾಗಲಿಲ್ಲ, ಅವನು ಸುರರೂಪವನ್ನು ಧರಿಸಿದನು. ನಾರದನಿಗೆ ದಿಗ್ಬ್ರಮೆಯಾಯಿತು. ರಾಜಕುಮಾರ ಹೇಳಿದನು ‘ಮಹಾತ್ಮರೇ ನಾನು ಮೊದಲು ಸಗಣಿಯ ಹುಳುವಾಗಿದ್ದೆ. ಆಗ ನೀವು ನನ್ನ ಹತ್ತಿರ ಬಂದಿದ್ದಿರಿ. ನಿಮ್ಮಂಥ ಸಜ್ಜನರ ಸಂಗದಿಂದ ಆ ರೂಪವನ್ನು ತ್ಯಜಿಸಿ ಪಾರಿವಾಳವಾದೆ. ಪುನಃ ನಿಮ್ಮ ಸಂಗದಿಂದ ರಾಜಕುಮಾರನಾಗಿ ಜನ್ಮವೆತ್ತಿದೆ. ಇನ್ನೊಮ್ಮೆ ನಿಮ್ಮ ಸುಸಂಗತಿಯ ಭಾಗ್ಯವನ್ನು ಕರುಣಿಸಿದಿರಿ. ಹಾಗಾಗಿ ನಾನು ಈಗ ದೈವತ್ವವನ್ನು ಪಡೆದೆ. ಇದೇ ಸಜ್ಜನರ ಸಂಗದ ಫಲ’.

    ಕನಕದಾಸರು ಈ ರೀತಿ ಹೇಳಿದ್ದಾರೆ: ‘ಸಜ್ಜನರ ಸಂಗದೊಳು ಇರಿಸೆನ್ನ ರಂಗ/ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ’.

    (ಲೇಖಕರು ಸಹ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts