

ಮುಂಬೈ: ಬಾಲಿವುಡ್ ಕಿಂಗ್ ಖಾನ್, ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಜವಾನ್ ಚಿತ್ರ ಕಳೆದ ವಾರ ಬಿಡುಗಡೆಗೊಂಡು ಇದೀಗ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ಶಾರೂಖ್ ಖಾನ್ ಮತ್ತು ನಟಿ ನಯನತಾರ ಮುಖ್ಯಭೂಮಿಕೆಯಲ್ಲಿ ನಟಿಸಿದ ಜವಾನ್ ಚಿತ್ರ ಬಿಡುಗಡೆಗೊಂಡ ಮೊದಲ ದಿನದಿಂದಲೂ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದ್ದು, ಇದೀಗ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಅತೀ ವೇಗವಾಗಿ 500 ಕೋಟಿ ರೂ. ಗಳಿಕೆ ಕಂಡ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಜವಾನ್ ಪಾತ್ರವಾಗಿದೆ.
ಅಟ್ಲೀ ಕುಮಾರ್ ನಿರ್ದೇಶನದ ಈ ಚಿತ್ರ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುವಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಚಿತ್ರಮಂದಿರಗಳಲ್ಲಿ ಶಾರೂಖ್ ಅವರ ಅಭಿಮಾನಿಗಳ ಅಬ್ಬರ ಜೋರಾಗಿದ್ದು, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಥಿಯೇಟರ್ಗಳತ್ತ ತೆರಳುತ್ತಿದ್ದಾರೆ. ಈ ವಾರವೂ ಚಿತ್ರ ಇದೇ ವೇಗವನ್ನು ಕಾಯ್ದುಕೊಂಡರೆ, ಪ್ರಾಯಶಃ ಇನ್ನೂ ಹೆಚ್ಚಿನ ದಾಖಲೆಗಳನ್ನು ಬರೆಯುವಲ್ಲಿ ಅನುಮಾನವೇ ಇಲ್ಲ.
ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಾಣದ ಜವಾನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).