More

    ಬಿಜೆಪಿಯ ಕೆಲವರಿಗೆ ಗ್ರಾಪಂ ಗೆಲ್ಲುವ ಶಕ್ತಿ ಇಲ್ಲ -ವರಿಷ್ಠರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

    ದಾವಣಗೆರೆ: ರಾಜ್ಯಾದ್ಯಂತ ಸಂಚರಿಸಿ, ಬಿಜೆಪಿಯನ್ನು ಬೂತ್ ಮಟ್ಟದಿಂದ ಬೆಳೆಸಿದ್ದು ಯಡಿಯೂರಪ್ಪ. ಆದರೆ, ಈಗ ಪಕ್ಷದ ಕಚೇರಿಯಲ್ಲಿ ಕುಳಿತವರು ಒಂದು ಗ್ರಾಮ ಪಂಚಾಯಿತಿ ಚುನಾವಣೆ ಸಹ ಗೆಲ್ಲಲಾರರು. ಅವರು ನನ್ನನ್ನೇನು ಮಾಡಲಾಗದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
    ಬಿಜೆಪಿಯಿಂದ ಉಚ್ಚಾಟಿತ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಅವರ ದಾವಣಗೆರೆ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
    ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರ ಪರಿಣಾಮ ಬಿಜೆಪಿ ಹೀನಾಯವಾಗಿ ಸೋತಿತು. ಪಕ್ಷ ಸಂಪೂರ್ಣ ಡ್ಯಾಮೇಜ್ ಆದ ಬಳಿಕ ಈಗ ಎಲ್ಲರೂ ಯಡಿಯೂರಪ್ಪ ನಾಯಕತ್ವ ಎನ್ನುತ್ತಿದ್ದಾರೆ. ಮತ ಗಳಿಸಲು, ಹೋರಾಟಕ್ಕೆ ಮಾತ್ರ ಬಿಎಸ್‌ವೈ ಬೇಕಾ? ಎಂದು ಪ್ರಶ್ನಿಸಿದರು.
    ಈ ಹಿಂದೆ ಬಿಜೆಪಿ ಅಧ್ಯಕ್ಷ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಹೇಳಿದಂತೆ ಯಡಿಯೂರಪ್ಪ, ಜಗದೀಶ ಶೆಟ್ಟರ್, ಈಶ್ವರಪ್ಪ ಅವರನ್ನು ರಾಜಕೀಯವಾಗಿ ಮುಗಿಸಿದ್ದಾರೆ ಎಂದು ಕಿಡಿಕಾರಿದರು.
    ನನ್ನ ಹೋರಾಟ ಯಾವುದೇ ವ್ಯಕ್ತಿ ವಿರುದ್ಧವಲ್ಲ. ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇನೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಾಡಬೇಕು. ಇದಕ್ಕೆಂದೇ 9ನೇ ವರ್ಷದ ಸಾಧನೆಯನ್ನು ಪ್ರತಿ ಹಳ್ಳಿಗೂ ಮುಟ್ಟಿಸಿದ್ದೇನೆ ಎಂದರು.
    ನಾಳೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಲಿದ್ದು, ನನ್ನನ್ನು ರೆಬೆಲ್ ರೇಣುಕಾಚಾರ್ಯ ಎಂದು ಕರೆದರೂ ಪರವಾಗಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಆದರೆ, ಅಲ್ಲ್ಲಿ ಅವಕಾಶ ಸಿಗದಿದ್ದರಿಂದಾಗಿ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದರು.
    ನನ್ನ ಮೇಲೂ ತೂಗುಗತ್ತಿ ತೂಗುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನೋಟಿಸ್‌ಗೂ ಉತ್ತರ ಕೊಡುವುದಿಲ್ಲ. ಮೊದಲು ಬಿಎಸ್‌ವೈ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
    ಪಕ್ಷವಿರೋಧಿ ಚಟುವಟಿಕೆ ಕಾರಣ ಹೇಳಿ ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ ಅವರ ಮೂವರು ಪುತ್ರರನ್ನು ಯಾವುದೇ ನೋಟಿಸ್ ನೀಡದೆಯೆ ಜಿಲ್ಲಾಧ್ಯಕ್ಷರು ಉಚ್ಚಾಟನೆ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಹೇಳಿದರು.
    ಗುರುಸಿದ್ದನಗೌಡರ ಪುತ್ರ ಡಾ. ರವಿಕುಮಾರ್ ಲೋಕಸಭಾ ಆಕಾಂಕ್ಷಿ ಎಂಬುದಾಗಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅವರು ಬೆಳೆಯದಿರಲೆಂಬ ಕಾರಣಕ್ಕೆ ಅವರನ್ನ್ನೂ ಉಚ್ಚಾಟನೆ ಮಾಡಲಾಗಿದೆ ಎಂದು ದೂರಿದರು.
    ರವೀಂದ್ರನಾಥ್ ಹಾಗೂ ಗುರುಸಿದ್ದನಗೌಡರನ್ನು ಮೂಲೆಗುಂಪು ಮಾಡಲಾಗಿದೆ. ಜಿಲ್ಲೆಯ ಐವರು ಶಾಸಕರು ಒಗ್ಗಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡದ ಪಕ್ಷದ ಜಿಲ್ಲಾಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಟೀಕಿಸಿದರು.
    ನಾನು ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್‌ಗೆ ಹೋಗುವುದಾಗಿ ಹೇಳಿಲ್ಲ. ಅವರೂ ಕರೆದಿಲ್ಲ. ನಾನು ಲೋಕಸಭಾ ಚುನಾವಣೆ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಒಂದು ವೇಳೆ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಹೋದಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts