More

    ಕೊಡವ ಹಾಕಿಗೆ ಗಿನ್ನಿಸ್ ಗರಿ

    ಮಡಿಕೇರಿ:

    ನಾಪೋಕ್ಲುವಿನಲ್ಲಿ ಒಂದು ತಿಂಗಳು ಕಾಲ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಭಾನುವಾರ ನಾಪೋಕ್ಲುವಿನಲ್ಲಿ ಈ ಘೋಷಣೆ ಮಾಡಿ ಕುಂಡ್ಯೊಳಂಡ ಕುಟುಂಬಕ್ಕೆ ದಾಖಲೆ ಹಸ್ತಾಂತರಿಸಿದರು.

    ಕುಂಡ್ಯೋಳಂಡ ಕುಟುಂಬಸ್ಥರಿಂದ ಆಯೋಜಿಸಲಾಗಿದ್ದ ಕುಂಡ್ಯೊಳಂಡ ಹಾಕಿ ಕಾರ್ನಿವಲ್ ಈಗ ಜಗತ್ತಿನ ಅತಿ ದೊಡ್ಡ ಫೀಲ್ಡ್ ಹಾಕಿ ಪಂದ್ಯಾವಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ೩೦ ದಿನಗಳ ಕಾಲ ನಡೆದಿದ್ದ ಈ ಪಂದ್ಯಾವಳಿಯಲ್ಲಿ ೩೬೦ಕ್ಕೂ ಹೆಚ್ಚು ತಂಡಗಳ ಸುಮಾರು ೩ ಸಾವಿರ ಕ್ರೀಡಾಪಟುಗಳು ಪಾಲ್ಗೊಂಡು ಸಂಭ್ರಮಿಸಿದರು.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೇಂದಂಡ ಕುಟುಂಬ ತಂಡ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ೩ನೇ ಬಾರಿಗೆ ಚೇಂದಂಡ ಕುಟುಂಬ ತಂಡ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ ಆದಂತಾಗಿದೆ. ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಸ್ಟೇಡಿಯಂನಲ್ಲಿ ನಡೆದ ಚೇಂದಂಡ ಮತ್ತು ನೆಲ್ಲಮಕ್ಕಡ ಕುಟುಂಬಗಳ ಮಧ್ಯೆ ನಡೆದ ಫೈನಲ್ಸ್ ಪಂದ್ಯ ರೋಚಕ ಹಣಾಹಣಿಯಿಂದ ಕೂಡಿತ್ತು.

    ಉಭಯ ತಂಡಗಳಿಂದಲೂ ಸಮಬಲದ ಹೋರಾಟ ಕಂಡುಬಂದಿತು. ಚೇಂದಂಡ ತಂಡದ ಪರ ಚೇಂದಂಡ ನಿಕಿನ್ ತಿಮ್ಮಯ್ಯ ೩೦ ಮತ್ತು ೩೮ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರೆ, ನೆಲ್ಲಮಕ್ಕಡ ತಂಡದ ಪರ ೪೪ನೇ ನಿಮಿಷದಲ್ಲಿ ನೆಲ್ಲಮಕ್ಕಡ ರೋಹನ್ ಮತ್ತು ೫೪ನೇ ನಿಮಿಷದಲ್ಲಿ ನೆಲ್ಲಮಕಡ ಮ್ಯಾಕ್ ತಲಾ ಒಂದೊಂದು ಗೋಲು ದಾಖಲಿಸಿದರು. ಕೊನೆಗೆ ಪೆನಾಲ್ಟಿ ಶೂಟ್ ಔಟ್‌ನಲ್ಲಿ ಚೇಂದಂಡಕ್ಕೆ ಗೆಲುವು ಸಿಕ್ಕಿತು.
    ನೆಲ್ಲಮಕ್ಕಡ ಸೋಮಯ್ಯ ತಮ್ಮ ಅದ್ಭುತ ಆಟದಿಂದಾಗಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಆಯ್ಕೆ ಆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts