More

    ಎಮ್ಮೆ ಮೇಯಿಸಿ ಬದುಕು ರೂಪಿಸಿಕೊಂಡ ಶ್ರೀರಂಗಪಟ್ಟಣದ ಶ್ರೀನಿವಾಸ್: ಬೈಗುಳವನ್ನೇ ವೇದವಾಕ್ಯವಾಗಿಸಿಕೊಂಡು ಕಾಯಕ ಮಾಡಿಕೊಂಡು ಜೀವನ ಸುಂದರವಾಗಿಸಿಕೊಂಡ ಛಲಗಾರ…!

    ಎಚ್.ಎಸ್.ಭರತ್‌ಕುಮಾರ್ ಶ್ರೀರಂಗಪಟ್ಟಣ
    ಯಾವುದೇ ವ್ಯಕ್ತಿಯ ಭವಿಷ್ಯ ಹಾಗೂ ಆತನ ವ್ಯಕ್ತಿತ್ವ ನಿರ್ಮಾಣಕ್ಕೆ ಕೆಲವೊಮ್ಮೆ ಬೈಗುಳಗಳು ಒಂದು ರೀತಿಯ ಅಡಿಪಾಯ ಸೃಷ್ಟಿಸಿಕೊಡುತ್ತವೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ನಗು ನಗುತಾ ನಮ್ಮ ತಪ್ಪನ್ನು ಬೆಂಬಲಿಸುವವರು ಹಿಂದೆ ಹಂಗಿಸಿ ಕಾಲೆಳೆಯುತ್ತಾರೆ, ಆದರೆ, ಬೈದು ಬುದ್ಧಿ ಹೇಳಿದವರು ಬದುಕಿನಲ್ಲಿ ಸರಿ ದಾರಿ ತೋರುತ್ತಾರೆ ಎಂಬ ಜನರ ನಾಣ್ಣುಡಿ ಎಂದಿಗೂ ಸುಳ್ಳಾಗುವುದಿಲ್ಲ.
    ಬಾಲ್ಯದ ವಿದ್ಯಾರ್ಥಿ ಜೀವನದಲ್ಲಿ ಶಾಲೆಗಳಲ್ಲಿ ಸರಿಯಾಗಿ ಓದದಿದ್ದರೆ ಶಿಕ್ಷಕರು ಅಥವಾ ಮನೆಯಲ್ಲಿ ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿದ್ದಾಗ ಪಾಲಕರು ಹಾಗೂ ಶಿಕ್ಷಕರ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಬೈಗುಳವೇ ‘ಎಲ್ಲಿಯಾದರೂ ಹೋಗಿ ಎಮ್ಮೆ ಕಾಯಿ’ ಎಂದು. ಆದರೆ ಇಲ್ಲೊಬ್ಬ ವ್ಯಕ್ತಿ ಆ ಬೈಗುಳವನ್ನೇ ತನ್ನ ಪಾಲಿಗೆ ದೊರೆತ ವೇದವಾಕ್ಯ ಎಂದು ಅದನ್ನು ತನ್ನಲ್ಲಿ ಅಳವಡಿಸಿಕೊಂಡು ಎಮ್ಮೆ ಕಾಯುವುದೇ ತನ್ನ ಬದುಕಿನ ಸಿದ್ಧಾಂತವನ್ನಾಗಿಸಿ ಪ್ರಸ್ತುತ ಎಮ್ಮೆ ಸಂಗೋಪನೆಯಿಂದ ಸುಂದರ ಬದುಕು ಕಂಡುಕೊಂಡಿದ್ದಾರೆ.
    ತಾಲೂಕಿನ ಕೂಡಲಕುಪ್ಪೆ ಗ್ರಾಮದ 50 ವರ್ಷದ ಶ್ರೀನಿವಾಸ್ ತಮಗಿರುವ ನಾಲ್ಕೈದು ಎಮ್ಮೆಗಳನ್ನು ಮೇಯಿಸಿಕೊಂಡು ಅದರಿಂದ ದೊರೆಯುವ ಹಾಲು ಉತ್ಪಾದನೆಯಿಂದ ತಮ್ಮ ಕುಟುಂಬ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಇವರು ಇದರಲ್ಲೇ ತನ್ನ ಲೋಕ ಸೃಷ್ಟಿಸಿಕೊಂಡಿದ್ದಾರೆ.
    ಗ್ರಾಮದಲ್ಲಿ ಶ್ರೀನಿವಾಸ್ ಅವರನ್ನು ಎಮ್ಮೆ ಸೀನಾ ಎಂದೇ ಕರೆಯಲಾಗುತ್ತದೆ. ಈ ಬಗ್ಗೆ ಶ್ರೀನಿವಾಸ್ ಬೇಸರಿಸಿಕೊಳ್ಳದೆ ತನಗೆ ಸಿಕ್ಕ ಗುರುತು ಎಂದು ಸಂತೋಷದಿಂದಲೇ ಸ್ವೀಕರಿಸುತ್ತಾರೆ. ಎಮ್ಮೆ ಮೇಯಿಸುವ ಕಾಯಕ ಹಾಗೂ ಕೃಷಿಯಿಂದ ಕುಟುಂಬ ನಿರ್ವಹಿಸುತ್ತಿರುವ ಶ್ರೀನಿವಾಸ್ ಪತ್ನಿಯೊಂದಿಗೆ ಉತ್ತಮ ಜೀವನ ನಡೆಸುವುದರ ಜತೆಗೆ ಮಕ್ಕಳಿಗೂ ಕೂಡ ಉನ್ನತ ಶಿಕ್ಷಣ ನೀಡುತ್ತಿದ್ದಾರೆ.

     

    ಎಮ್ಮೆ ಮೇಯಿಸಿ ಬದುಕು ರೂಪಿಸಿಕೊಂಡ ಶ್ರೀರಂಗಪಟ್ಟಣದ ಶ್ರೀನಿವಾಸ್: ಬೈಗುಳವನ್ನೇ ವೇದವಾಕ್ಯವಾಗಿಸಿಕೊಂಡು ಕಾಯಕ ಮಾಡಿಕೊಂಡು ಜೀವನ ಸುಂದರವಾಗಿಸಿಕೊಂಡ ಛಲಗಾರ…!

    10 ಗುಂಟೆ ಜಮೀನಿನಲ್ಲಿ ಕೃಷಿ, ಎಮ್ಮೆ ಮೇಯಿಸುವುದರಲ್ಲಿ ಖುಷಿ
    ಶ್ರೀನಿವಾಸ್ ಕೂಡಲಕುಪ್ಪೆ ಗ್ರಾಮದಲ್ಲಿ ತಮಗೆ ಪಿತ್ರಾರ್ಜಿತ ಆಸ್ತಿಯಾಗಿ ದೊರೆತ 10ಗುಂಟೆ ಜಮೀನಿನ ಪೈಕಿ 8 ಗುಂಟೆಯಲ್ಲಿ ಕಬ್ಬು ಬೆಳೆದಿದ್ದು, 2 ಗುಂಟೆ ಜಮೀನಿನಲ್ಲಿ ಎಮ್ಮೆಗಳ ಮೇವಿಗಾಗಿ ಫಾರ್ಮ್ ಹುಲ್ಲನ್ನು ಹಾಕಿದ್ದಾರೆ. ತಮ್ಮ ಕೈಲಾದಷ್ಟು ಮಟ್ಟಿಗೆ ಕೃಷಿ ಕಾರ್ಯ ಮಾಡುವ ಇವರು ಹೆಚ್ಚಾಗಿ ಎಮ್ಮೆಗಳ ಸಂಗೋಪನೆಗೆ ಆದ್ಯತೆ ನೀಡಿದ್ದಾರೆ.
    ಪ್ರತಿನಿತ್ಯ ಬೆಳಗ್ಗೆ 4.30ರಿಂದಲೇ ಎಮ್ಮೆಗಳ ಕಾಳಜಿಗೆ ಮುಂದಾಗುವ ಶ್ರೀನಿವಾಸ್ ಕೊಟ್ಟಿಗೆಯಲ್ಲಿದ್ದ ಎಮ್ಮೆಗಳನ್ನು ಹೊರಗೆ ಕಟ್ಟಿ, ಅಲ್ಲಿದ್ದ ಸಗಣಿಯನ್ನು ಶುಚಿಯಾಗಿ ತೆರವು ಮಾಡಿ, ಹಾಲು ಕರೆದು ಬಳಿಕ ಅವುಗಳಿಗೆ ಕಲಗಚ್ಚು, ತಿಂಡಿ-ಬೂಸ ಕೊಟ್ಟು ಆರೈಕೆ ಮಾಡಿ ಗ್ರಾಮದ ಉತ್ಪಾದಕರ ಸಂಘಕ್ಕೆ ಹಾಲು ಹಾಕುತ್ತಾರೆ. ನಂತರ ಎಮ್ಮೆಗಳಿಗೆ ಜಮೀನಿನಲ್ಲಿ ಬೆಳೆದ ಹುಲ್ಲುತಂದು ಹಾಕುತ್ತಾರೆ. ನಂತರ ಎಮ್ಮೆ ಮೇಯಿಸುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ.

    ಎಮ್ಮೆ ಮೇಯಿಸಿ ಬದುಕು ರೂಪಿಸಿಕೊಂಡ ಶ್ರೀರಂಗಪಟ್ಟಣದ ಶ್ರೀನಿವಾಸ್: ಬೈಗುಳವನ್ನೇ ವೇದವಾಕ್ಯವಾಗಿಸಿಕೊಂಡು ಕಾಯಕ ಮಾಡಿಕೊಂಡು ಜೀವನ ಸುಂದರವಾಗಿಸಿಕೊಂಡ ಛಲಗಾರ…!

    ಬದುಕಿಗೆ ಆಸರೆಯಾದ ಎಮ್ಮೆಗಳು
    ಶ್ರೀನಿವಾಸ್ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯೊಂದಿಗೆ ಕೂಡಲಕುಪ್ಪೆ ಗ್ರಾಮದಲ್ಲಿ ನೆಲೆಸಿದ್ದು, ಮನೆಯಲ್ಲಿ ಸಾಕಿರುವ 4 ಎಮ್ಮೆಗಳೇ ಬದುಕು ಕಟ್ಟಿಕೊಳ್ಳಲು ಆಸರೆಯಾಗಿವೆ. ನಿತ್ಯ 8ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಇದರಿಂದ ಬರುವ ಆದಾಯದಲ್ಲೇ ಬದುಕು ಕಂಡುಕೊಂಡಿದ್ದಾರೆ. ಎಮ್ಮೆಗಳಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ಮಾರಾಟಮಾಡಿ ಇದರಿಂದಲೂ ಆದಾಯ ಕಂಡುಕೊಂಡಿದ್ದಾರೆ.
    ಕಷ್ಟಪಟ್ಟು ದುಡಿದ ಹಣವನ್ನು ಕಾರಣವಿಲ್ಲದೆ ಪೋಲು ಮಾಡದ ಶ್ರೀನಿವಾಸ್, ಇತ್ತೀಚೆಗೆ ಗ್ರಾಮದಲ್ಲಿ ಮನೆಯೊಂದನ್ನು ಖರೀದಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ಎಮ್ಮೆಗಳಿಗೆ ಕೊಟ್ಟಿಗೆಯನ್ನೂ ನಿರ್ಮಿಸಿದ್ದಾರೆ.
    ಮೂರು ಅಕ್ಕಂದಿರ ಮದುವೆ: ಕಡು ಬಡತನ ಕುಟುಂಬದಲ್ಲಿ ನಾಲ್ಕು ಮಕ್ಕಳ ನಂತರ ಕೊನೆಯವರಾಗಿ ಜನಿಸಿದ ಶ್ರೀನಿವಾಸ್ ಮೂವರು ಅಕ್ಕಂದಿರೊಂದಿಗೆ ಬೆಳೆದರು. ಓದು ತಲೆಗೆ ಹತ್ತದೆ ಶಿಕ್ಷಣ ತ್ಯಜಿಸಿ 40 ವರ್ಷಗಳ ಹಿಂದೆ ತನ್ನ ತಂದೆಯಿಂದ ದೊರೆತ 2 ಎಮ್ಮೆಗಳನ್ನು ಗ್ರಾಮದಲ್ಲಿ ಮೇಯಿಸುವ ಜತೆಗೆ ಇತರರ ಜಮೀನಿನಲ್ಲಿ ಕೃಷಿ ಕೂಲಿ ಕಾರ್ಮಿಕನಾಗಿ ದುಡಿದು ತನ್ನ ಕುಟುಂಬಕ್ಕೆ ನೆರವಾದರು. ಎಮ್ಮೆ ಮೇಯಿಸಿಕೊಂಡೆ ಮೂವರು ಅಕ್ಕಂದಿರ ಮದುವೆಗೆ ಹೆಗಲು ನೀಡಿದ ಇವರು ಮುಂದೆ ತಮ್ಮ ವಿವಾಹದ ಬಳಿಕ ಬದುಕು ರೂಪಿಸಿಕೊಳ್ಳಲು ಎಮ್ಮೆಗಳನ್ನೇ ಆಶ್ರಯಿಸಿದ್ದಾರೆ.
    ತಲೆಗೆ ಹತ್ತದ ಶಿಕ್ಷಣ, ಗುರುವಿನ ಬೈಗುಳವೇ ಬದುಕಿಗೆ ಗುರಿ: ಶ್ರೀನಿವಾಸ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿವರೆಗೆ ಕಲಿತಿದ್ದು, ಬಳಿಕ ಹೆಚ್ಚಿನ ಶಿಕ್ಷಣಕ್ಕಾಗಿ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಅಭ್ಯಾಸ ನಡೆಸಿದ್ದರು. ಆದರೆ, ಶಾಲೆಯ ಗುರುಗಳು, ಜತೆಗಿದ್ದ ಸ್ನೇಹಿತರು ಸೇರಿದಂತೆ ಯಾರೂ ಎಷ್ಟು ಹೇಳಿಕೊಟ್ಟರು ಶಿಕ್ಷಣ ತಲೆಗೆ ಹತ್ತದೆ ನಿತ್ಯವೂ ನಿಂದನೆಗೆ ಒಳಗಾಗುತ್ತಿದ್ದ ಶ್ರೀನಿವಾಸ್ ತಾವೂ ಎಮ್ಮೆ ಮೇಯಿಸಿಕೊಂಡೆ ತಮ್ಮ ಜೀವನ ನಿರ್ಮಿಸಿಕೊಳ್ಳುವ ಪಣ ತೊಟ್ಟಿದ್ದು, ಇಂದಿಗೂ ಅದನ್ನೇ ಪ್ರಮುಖ ಕಾಯಕವನ್ನಾಗಿಸಿಕೊಂಡಿದ್ದಾರೆ. ಹಿಂದೆ ತಮಗಿದ್ದ ಪರಿಸ್ಥಿತಿಯಲ್ಲಿ ಸರಿಯಾದ ಶಿಕ್ಷಣ ಕಲಿಕೆ ಮಾಡಲಾಗದ್ದನ್ನು ಸ್ಮರಿಸಿ ತಮ್ಮ ಪುತ್ರ ಹಾಗೂ ಪುತ್ರಿಗೆ ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ.

    ಎಮ್ಮೆ ಮೇಯಿಸಿ ಬದುಕು ರೂಪಿಸಿಕೊಂಡ ಶ್ರೀರಂಗಪಟ್ಟಣದ ಶ್ರೀನಿವಾಸ್: ಬೈಗುಳವನ್ನೇ ವೇದವಾಕ್ಯವಾಗಿಸಿಕೊಂಡು ಕಾಯಕ ಮಾಡಿಕೊಂಡು ಜೀವನ ಸುಂದರವಾಗಿಸಿಕೊಂಡ ಛಲಗಾರ…!

    ಎಮ್ಮೆಗಳ ಆರೈಕೆಗೆ ಒತ್ತು: ಕಾಯಕದಲ್ಲೇ ಹೆಚ್ಚು ಕಾಲ ಕಳೆಯುವ ಶ್ರೀನಿವಾಸ್ ಎಮ್ಮೆಗಳ ಆರೈಕೆ ಹಾಗೂ ಕೃಷಿ ಹೊರತುಪಡಿಸಿ ಎಲ್ಲೂ ಕೂಡ ಹೊರ ಹೋಗುವುದಿಲ್ಲ. ತಮಗಿರುವ ಬಡತನವನ್ನು ನೆನದು ಪ್ರತಿ ದಿನವೂ ಶ್ರಮಿಕ ಬದುಕಾಗಿ ಪರಿವರ್ತಿಸಿಕೊಂಡಿರುವ ಇವರು ತಾವು ಸಾಕಿರುವ ಎಮ್ಮೆಗಳಿಗೆ ನಿತ್ಯ ಕೈ ಮುಗಿದು ಸ್ವಂತ ಮಕ್ಕಳಂತೆ ಸಾಕಿ ಸಲಹಿದ್ದಾರೆ. ಎಲ್ಲ ಎಮ್ಮೆಗಳನ್ನು ಕಟ್ಟುವ ಕೊಟ್ಟಿಗೆಯನ್ನು ಬೆಳಗ್ಗೆ-ಸಂಜೆ ಶುಚಿಯಾಗಿ ಕಾಪಾಡಿರುವ ಇವರು, ಪ್ರತಿನಿತ್ಯ ಎಮ್ಮೆಗಳ ಮೈ ತೊಳೆದು ಅವುಗಳನ್ನು ಶುಚಿಯಾಗಿರಿಸುತ್ತಾರೆ. ಇನ್ನು ಪಶುವೈದ್ಯರು ನೀಡುವ ಸೂಚನೆ, ಸಲಹೆ ಹಾಗೂ ಅಗತ್ಯ ಚಿಕಿತ್ಸೆಗಳನ್ನು ಕಾಲಕಾಲಕ್ಕೆ ಕೊಡಿಸುವ ಇವರು ಎಮ್ಮೆಗಳಲ್ಲಿ ಪೌಷ್ಟಿಕತೆಗೆ ಕೊರತೆಯಾಗದಂತೆ ಮೇವಿನೊಂದಿಗೆ ಅಗತ್ಯ ಪಶು ಆಹಾರಗಳನ್ನು ನಿಯಮಿತವಾಗಿ ಒದಗಿಸುತ್ತಾರೆ.
    ಕಡಿಮೆ ಲಾಭದಲ್ಲಿ ಸಂತೃಪ್ತ ಜೀವನ: ಶ್ರೀನಿವಾಸ್ ತಮಗಿರುವ ಎಮ್ಮೆಗಳ ಸಂಗೋಪನೆ, ಕೊಟ್ಟಿಗೆ ಗೊಬ್ಬರ ಮಾರಾಟ ಹಾಗೂ ಕಬ್ಬು ಬೆಳೆಯಿಂದ ಸಿಕ್ಕ ಲಾಭವಾಗಿ ವಾರ್ಷಿಕ 1.50 ಲಕ್ಷದವರೆಗೆ ಆದಾಯ ಗಳಿಸಲಿದ್ದು, ಸಿಗುವ ಕಡಿಮೆ ಲಾಭದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಂತೃಪ್ತ ಜೀವನ ಕಂಡುಕೊಂಡಿದ್ದಾರೆ. ಒಬ್ಬ ಪುತ್ರ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಬಿ.ಎ ವ್ಯಾಸಂಗ ಮಾಡುತ್ತಿದ್ದು, ಪುತ್ರಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ.

    ಕಾಯಕ ನನ್ನ ಹೆಮ್ಮೆ
    ಶಿಕ್ಷಣ ತಿಳಿಯದ ನನಗೆ ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದನ್ನು ಎಮ್ಮೆಗಳು ಕಲಿಸಿವೆ. ಕಷ್ಟದ ಸಮಯದಲ್ಲಿ ಜನರು ನೆರವಾಗದಿದ್ದಾಗ ಈ ಮೂಕ ಪ್ರಾಣಿಗಳು ಜತೆಯಾಗಿ ಬದುಕಿನ ಪಾಠದ ಜತೆಗೆ ಸಂಯಮದೊಂದಿಗೆ ತಾಳ್ಮೆ ಕಲಿಸಿವೆ. ನಾವು ಮಾಡುವ ಕಾಯಕದಲ್ಲಿ ಪ್ರೀತಿ, ಶ್ರದ್ಧೆ ಹಾಗೂ ನಂಬಿಕೆ ಇದ್ದಲ್ಲಿ, ತಡವಾದರೂ ಕಾಯಕ ನಿಷ್ಠೆಯಿಂದ ಯಶಸ್ಸು ಸಿಗಲಿದೆ.
    ಶ್ರೀನಿವಾಸ್(ಎಮ್ಮೆ ಸೀನಾ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts