ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಜಿಲ್ಲಾಧಿಕಾರಿ

Meeting regarding clearing encroachment of lakes mandya
Published on

ಮಂಡ್ಯ: ಜಿಲ್ಲೆಯಲ್ಲಿ ಜೂ.15ರೊಳಗಾಗಿ ಪಂಚಾಯಯ್ ರಾಜ್ ಇಂಜಿನಿಯರಿಂಗ್ ವಿಭಾಗದ 35 ಕೆರೆ, ಸಣ್ಣ ನೀರಾವರಿ ಇಲಾಖೆ 2, ಹೇಮಾವತಿ ಎಡದಂಡೆ ನಾಲಾ ವಿಭಾಗದ 33, ಕಾವೇರಿ ನೀರಾವರಿ ನಿಗಮದ 15 ಸೇರಿದಂತೆ ಒಟ್ಟು 85 ಕೆರೆಗಳ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 962 ಕೆರೆಗಳಿವೆ. ಭೂ ದಾಖಲೆಗಳ ಇಲಾಖೆಯ ಸಹಯೋಗದೊಂದಿಗೆ ಕೆರೆಗಳನ್ನು ಅಳತೆ ಮಾಡಲಾಗಿದೆ. ಈ ಪೈಕಿ 448 ಕೆರೆಗಳಲ್ಲಿ ಒತ್ತುವರಿ ಕಂಡುಬಂದಿದ್ದು, ಅದರಲ್ಲಿ 200 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದರು.

248 ಕೆರೆಗಳ ಒತ್ತುವರಿಯನ್ನು ತೆರವು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಿಗದಿಪಡಿಸಿರುವ ದಿನದೊಳಗೆ 85 ಕೆರೆಗಳ ಒತ್ತುವರಿಯನ್ನು ತಹಸೀಲ್ದಾರ್, ಪೊಲೀಸ್ ಇಲಾಖೆಯ ಸಹಾಯ ಪಡೆದು ತೆರವುಗೊಳಿಸಿ ವರದಿ ನೀಡಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಎಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಯನ್ನು ಸಂರಕ್ಷಿಸಬೇಕು. ನಿಯಮಿತವಾಗಿ ಕೆರೆಗಳ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಮೊದಲ ಹಂತದಲ್ಲಿ 85 ಕೆರೆಗಳ ಒತ್ತುವರಿಯನ್ನು ಜೂ.15 ರೊಳಗಾಗಿ ತೆರವುಗೊಳಿಸಿ ವರದಿ ನೀಡುವಂತೆ ತಿಳಿಸಲಾಗಿದೆ. ಒತ್ತುವರಿ ತೆರವುಗೊಳಿಸದಿದ್ದಲ್ಲಿ ಕರ್ನಾಟಕ ಭೂ ದಾಖಲೆಗಳ ಕಾಯ್ದೆಯ ಸೆಕ್ಸನ್ 192 ರ ಪ್ರಕಾರ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿರುವ ಕೆರೆಗಳನ್ನು ಅಳತೆ ಮಾಡಿಸಿ ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಮೇ.13ರ ಸಂಜೆ 5 ಗಂಟೆಯೊಳಗಾಗಿ ಕಡತ ಸಲ್ಲಿಕೆಯಾಗದಿದ್ದರೆ ನೋಟಿಸ್ ಜಾರಿ ಮಾಡಲಾಗುವುದು. ಕೆರೆಗಳನ್ನು ಸರಿಯಾಗಿ ಸಂರಕ್ಷಣೆ ಮಾಡದಿದ್ದರೆ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲದೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಕೆರೆಯ ಸುತ್ತದ 30 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಒತ್ತುವರಿಯಂತಹ ಸಮಸ್ಯೆಗಳು ಬರುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಡಿಡಿಎಲ್ಆರ್ ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net