

ಅಮರಾವತಿ: 2024ರಲ್ಲಿ ನಡೆಯುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ವಿರುದ್ಧ ತೆಲುಗು ದೇಶಂ ಪಾರ್ಟಿ ಹಾಗೂ ಜನಸೇನಾ ಪಕ್ಷ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ನಟ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ರಾಜಮಂಡ್ರಿಯಲ್ಲಿರುವ ರಾಜ ಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಭು ನಾಯ್ಡು ಅವರನ್ನು ಭೇಟಿ ಮಾಡಿದ ಬಳಿಕ ಅವರು ಟಿಡಿಪಿ ಹಾಗೂ ಜನಸೇನಾ ಮೈತ್ರಿಯನ್ನು ಪ್ರಕಟಿಸಿದ್ದಾರೆ.
ಬಳಿಕ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ನಟ ಪವನ್ ಕಲ್ಯಾಣ್ ವೈಎಸ್ಆರ್ ಕಾಂಗ್ರೆಸ್ ದುರಾಡಳಿತವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರಬಲ ಹೋರಾಟ ನಡೆಸಲಾಗುವುದು. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ವೇಳೆ ಟಿಡಿಪಿ ಕಾರ್ಯದರ್ಶಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್, ತೆಲುಗು ನಟ, ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕ ನಂದಮೂರಿ ಬಾಲಕೃಷ್ಣ ಉಪಸ್ಥಿತಿರಿದ್ದರು.