

ಚೆನ್ನೈ: ಸನಾತನ ಧರ್ಮವನ್ನು ಏಡ್ಸ್ ರೋಗಕ್ಕೆ ಹೋಲಿಸಿ ವಿವಾದಕ್ಕೀಡಾಗಿದ್ದ ಡಿಎಂಕೆ ಪಕ್ಷದ ಸಂಸದ ಎ. ರಾಜಾ ಇದೀಗ ಹಿಂದೂ ಧರ್ಮ ಇಡೀ ವಿಶ್ವಕ್ಕೆ ಅಪಾಯಕಾರಿ ಎಂದು ಹೇಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇವರ ಹೇಳಿಕೆಯ ತುಣುಕನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಎ. ರಾಜಾ ಜಾತಿ ಪದ್ದತಿ ಎಂಬ ಜಾಗತಿಕ ಕಾಯಿಲೆಗೆ ಭಾರತ ಕಾರಣವಾಗಿದೆ. ಭಾರತ ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ. ಜಾತಿಯನ್ನು ಬಳಸಿಕೊಂಡು ಜನರನ್ನು ಆರ್ಥಿಕವಾಗಿ ವಿಂಗಡಿಸಲಾಗಿದೆ. ಸಾಮಾಜಿಕ ಅಸ್ಥಿರತೆಯನ್ನು ಸೃಷ್ಟಿಸಲು ಜಾತಿಯನ್ನು ಬಳಸಲಾಗುತ್ತದೆ. ಇದರಿಂದ ಆರ್ಥಿಕ ಅಸಮಾನತೆ ಉಂಟಾಗುತ್ತದೆ.
ವಿದೇಶದಲ್ಲಿ ವಾಸಿಸುವ ಭಾರತೀಯರೂ ಕೂಡ ಧರ್ಮದ ಹೆಸರಿನಲ್ಲಿ ಜಾತಿಯನ್ನು ಹರಡುತ್ತಾರೆ. ಭಾರತಕ್ಕೆ ಮಾತ್ರವಲ್ಲದೆ ಹಿಂದೂ ಧರ್ಮ ಇಡೀ ವಿಶ್ವಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಸದ ಎ. ರಾಜಾ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನೂ ನೀಡುತ್ತಿರುವುದು ಇದೇ ಮೊದಲಲ್ಲ.
ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಡಿಎಂಕೆ ಸಂಸದ ಎ. ರಾಜಾ ಹಿಂದೂ ಧರ್ಮ ಇಡೀ ವಿಶ್ವಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಜಾತಿ ವಿಭಜನೆ ಹಾಗೂ ದ್ವೇಷವನ್ನು ಹುಟ್ಟುಹಾಕುವಲ್ಲಿ ಡಿಎಂಕೆ ನಾಯಕ ಪ್ರಮುಖ ಪಾತ್ರ ವಹಿಸುತ್ತಿದ್ದು, ಸನಾತನ ಧರ್ಮವನ್ನು ದೂಷಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.