ಡಿಸೆಂಬರ್​​ನಲ್ಲೇ ವಕ್ಕರಿಸಿದೆ ಕರೊನಾ...ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !

Wuhan 20 June 20
Published on

ರೋಮ್​: ನವೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಪ್ರಾರಂಭವಾದ ಕೊವಿಡ್​-19 ಹಂತಹಂತವಾಗಿ ಬೇರೆ ಬೇರೆ ದೇಶಗಳಿಗೆ ಕಾಲಿಟ್ಟಿದೆ.

ಭಾರತದಲ್ಲಿ ಮೊದಲ ಕರೊನಾ ವೈರಸ್​ ಪ್ರಕರಣ ಕಾಣಿಸಿಕೊಂಡಿದ್ದು ಜನವರಿಯಲ್ಲಿ. ಹಾಗೇ ಇಟಲಿಯಲ್ಲೂ ಸಹ ಜನವರಿ 31ರಂದು ಮೊದಲು ಚೀನಾದ ದಂಪತಿಯಲ್ಲಿ ಕೊವಿಡ್​-19 ಪತ್ತೆಯಾಗಿತ್ತು. ರೋಮ್​​ನಲ್ಲಿ ಮೊದಲು ಶುರುವಾದ ಕರೊನಾ ಇಡೀ ಇಟಲಿಯನ್ನು ನಲುಗಿಸಿದೆ. ಇದನ್ನೂ ಓದಿ: 24ಗಂಟೆಯಲ್ಲಿ 14 ಸಾವಿರಕ್ಕೂ ಹೆಚ್ಚು ಹೊಸ ಕರೊನಾ ಪ್ರಕರಣಗಳು…

ಆದರೆ ಈ ಮಧ್ಯೆ ಒಂದು ಅಚ್ಚರಿಯ ವಿಷಯ ಹೊರಬಿದ್ದಿದೆ. ಇಟಲಿಗೆ ಜನವರಿಯಲ್ಲಲ್ಲ..ಡಿಸೆಂಬರ್​​ನಲ್ಲಿಯೇ ಪ್ರವೇಶಿಸಿದೆ. ಅದೂ ಒಳಚರಂಡಿಯಲ್ಲಿ ಇತ್ತು ಎಂದು ಅಧ್ಯಯನದ ವರದಿಯೊಂದು ಹೇಳಿದೆ.

ಇಟಲಿಯ ಮಿಲನ್​ ಮತ್ತು ಟುರಾನ್​ ಸಿಟಿಗಳ ಒಳಚರಂಡಿಗಳಿಂದ ಡಿಸೆಂಬರ್​ 18ರಂದು ತೆಗೆದುಕೊಳ್ಳಲಾಗಿದ್ದ ಮತ್ತು ಬೊಲೊಗ್ನಾದಲ್ಲಿರುವ ಚರಂಡಿಗಳಿಂದ ಜ.29ರಂದು ತೆಗೆದುಕೊಳ್ಳಲಾಗಿದ್ದ ತ್ಯಾಜ್ಯದ ನೀರಿನಲ್ಲಿ ಸಾರ್ಸ್​-ಕೊವಿಡ್​-2 ಕುರುಹುಗಳು ಪತ್ತೆಯಾಗಿವೆ ಎಂದು ಇಟಲಿಯ ಐಎಸ್​ಎಸ್​ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ. ಈ ರಿಸರ್ಚ್​​ನ ನೇತೃತ್ವ ವಹಿಸಿದ್ದ ಗೈಸೆಪ್ಪಿನಾ ಲಾ ರೋಸಾ ಅವರು ಅಧಿಕೃತ ಮಾಹಿತಿ ನೀಡಿದ್ದು, ಜನವರಿ ಮತ್ತು ಫೆಬ್ರವರಿಗಳಲ್ಲಿ ಸಂಗ್ರಹಿಸಲಾದ ತ್ಯಾಜ್ಯದ ನೀರಿನಲ್ಲಿಯೂ ಕರೊನಾ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ಬಾಲಿವುಡ್​ನ ಓರ್ವ ನಟನಿಂದಲೇ ಸಂಕಷ್ಟ…’: ಮ್ಯೂಸಿಕ್​ ಮಾಫಿಯಾ ಕರಾಳ ಸತ್ಯ ಬಿಚ್ಚಿಟ್ಟ ಸೋನು ನಿಗಂ

ಇಟಲಿಯಲ್ಲಿ 2007ರಿಂದ ಪ್ರತಿ ವರ್ಷವೂ ಹೀಗೆ ಒಳಚರಂಡಿ ನೀರುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪರಿಸರ ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನದ ಒಂದು ಭಾಗವಾಗಿ ಐಎಸ್​ಎಸ್​ನ ಪರಿಸರ ಮತ್ತು ಆರೋಗ್ಯ ಇಲಾಖೆ ನಿಯಮಿತವಾಗಿ ತ್ಯಾಜ್ಯಗಳ ಪರಿಶೀಲನೆ ಮಾಡುತ್ತದೆ. ಈ ಬಾರಿಯೂ ಸಹ 2019ರ ಅಕ್ಟೋಬರ್​ನಿಂದ 2020ರ ಫೆಬ್ರವರಿಯವರೆಗೆ ಒಟ್ಟು 40 ಒಳಚರಂಡಿಗಳ ತ್ಯಾಜ್ಯದ ನೀರಿನ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಅದರ ವರದಿಯ ಅನ್ವಯ ಡಿಸೆಂಬರ್​ನಲ್ಲಿ ಸಂಗ್ರಹ ಮಾಡಲಾದ ನೀರಿನಲ್ಲಿ ಕರೊನಾದ ಅಂಶಗಳು ಪತ್ತೆಯಾಗಿವೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net