More

    ಸುಶಾಂತ್​ ಸಿಂಗ್​​ ಓರ್ವ ನಟ ಎಂಬುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ? ಮತ್ತೊಂದು ಎಡವಟ್ಟು?

    ನವದೆಹಲಿ: ಬಾಲಿವುಡ್​ ಯುವನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿಗೆ ಅವರ ಸಹೋದ್ಯೋಗಿ ಕಲಾವಿದರು, ರಾಜಕಾರಣಿಗಳು, ಕ್ರಿಕೆಟ್​ ಆಟಗಾರರೆಲ್ಲ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿವೃತ್ತಿಯಲ್ಲಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದ ನಟ ಸುಶಾಂತ್​ ಸಿಂಗ್​ ಸಾವಿನಿಂದ ಅವರ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ. ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.
    ಆದರೆ ಈ ವಿಚಾರದಲ್ಲೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸುದ್ದಿಯಾಗಿದ್ದರು. ರಾಹುಲ್​ ಗಾಂಧಿಯವರು ಸುಶಾಂತ್​ ರಜಪೂತ್​ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡುವಾಗ, ಸುಶಾಂತ್​ ಒಬ್ಬ ಕ್ರಿಕೆಟರ್​ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿತ್ತು. ಒಬ್ಬ ನಟನನ್ನು ರಾಹುಲ್​ ಗಾಂಧಿ ಕ್ರಿಕೆಟರ್​ ಎಂದು ಹೇಳಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗಿತ್ತು.

    ಟ್ವಿಟರ್​ ಬಳಕೆದಾರ ಪಿಯುಶ್​ ರಂಜನ್​ ಎಂಬುವರು ರಾಹುಲ್​ ಗಾಂಧಿಯವರು ಮಾಡಿದ ಟ್ವೀಟ್​​ನ ಸ್ಕ್ರೀನ್​ ಶಾಟ್​ ಪೋಸ್ಟ್ ಮಾಡಿದ್ದರು. ರಾಹುಲ್ ಅಧಿಕೃತ ಖಾತೆಯ ಟ್ವೀಟ್​ನ ಸಾರಾಂಶ ಹೀಗಿತ್ತು. ಪ್ರತಿಭಾವಂತ ಕ್ರಿಕೆಟರ್​ ಆಗಿದ್ದ ಸುಶಾಂತ್ ಅವರ ಸಾವಿನ ಸುದ್ದಿ ಕೇಳಿ ತುಂಬ ನೋವಾಯಿತು. ತುಂಬ ಬೇಗನೇ ಹೋಗಿಬಿಟ್ಟರು. ಅವರ ಸಾವಿನ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ದೇವರು ನೀಡಲಿ ಎಂದು ಇತ್ತು.

    ಈ ಟ್ವೀಟ್​ ನೋಡುತ್ತಲೇ ಅನೇಕರು ಕಾಮೆಂಟ್​ ಮಾಡಿದ್ದರು. ರಾಹುಲ್​ ಗಾಂಧಿಯವರು ಸುಶಾಂತ್​​ ಅವರನ್ನು ಕ್ರಿಕೆಟರ್ ಎಂದು ಯಾಕೆ ಅಂದುಕೊಂಡರು? ಅವರಿಗೆ ಸುಶಾಂತ್​ ಒಬ್ಬ ನಟ ಎಂಬುದೂ ಗೊತ್ತಿಲ್ಲವಾ? ಎಂದೆಲ್ಲ ಕೆಲವರು ಟೀಕಿಸಲು ಶುರು ಮಾಡಿದ್ದರು. ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋದಿ ಮಾಸ್ಕ್​: ಭರ್ಜರಿ ಮಾರಾಟ

    ಆದರೆ ಈ ಟ್ವೀಟ್​ ನಿಜವಲ್ಲ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂನ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ರಾಹುಲ್​ ಗಾಂಧಿಯವರು ಮಾಡಿದ ಟ್ವೀಟ್​ನ್ನು ತಿರುಚಲಾಗಿದೆ. ಅವರು ತಮ್ಮ ಟ್ವೀಟ್​​ನಲ್ಲಿ ಸುಶಾಂತ್​ ಒಬ್ಬ ನಟ ಎಂದೇ ಉಲ್ಲೇಖಿಸಿದ್ದಾರೆ ಹೊರತು, ಕ್ರಿಕೆಟರ್​ ಎಂದು ಬರೆದಿಲ್ಲ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: PHOTOS| ಚೂಟಿ ಹುಡುಗನ ನೆನಪುಗಳು; ಸುಶಾಂತ್​ ಸಿಂಗ್​ ಬಾಲ್ಯದ ಫೋಟೋಗಳನ್ನು ನೀವು ನೋಡಲೇಬೇಕು..

    ರಾಹುಲ್​ ಗಾಂಧಿಯವರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಡಲಾಗಿದ್ದ ಒರಿಜಿನಲ್​ ಟ್ವೀಟ್​ನ್ನು ತಿರುಚಿ, ಆ್ಯಕ್ಟರ್​ ಎಂದು ಬರೆದುಕೊಂಡಿದ್ದ ಜಾಗದಲ್ಲಿ ಕ್ರಿಕೆಟರ್​ ಎಂದು ಮಾಡಲಾಗಿದೆ. ನೈಜ ಟ್ವೀಟ್​ ಮತ್ತು ವೈರಲ್​ ಆದ ಫೇಕ್​ ಟ್ವೀಟ್​​ನ ಸಮಯಗಳೂ ಒಂದೇ ಇವೆ. ಎರಡೂ ಕೂಡ ಸಂಜೆ 7.31 ಎಂದು ಟೈಮ್​ ತೋರಿಸುತ್ತಿವೆ. ಒಂದೊಮ್ಮೆ ಏನಾದರೂ ರಾಹುಲ್​ ಗಾಂಧಿಯವರು ತಮ್ಮ ಟ್ವಿಟರ್​ನಲ್ಲಿ ಕ್ರಿಕೆಟರ್​ ಎಂದು ಬರೆದು, ನಂತರ ಅದನ್ನು ಡಿಲೀಟ್​ ಮಾಡಿ, ಆ್ಯಕ್ಟರ್​ ಎಂದು ಸರಿಪಡಿಸಿ ಮತ್ತೊಮ್ಮೆ ಟ್ವೀಟ್​ ಮಾಡಿದ್ದರೆ ಸಮಯ ಬೇರೆ ತೋರಿಸಬೇಕಿತ್ತು. ಕೆಲವೇ ನಿಮಿಷಗಳಾದರೂ ವ್ಯತ್ಯಾಸ ಆಗಬೇಕಿತ್ತು. ಆದರೆ ಹಾಗೇನೂ ಆಗದ ಕಾರಣ, ರಾಹುಲ್​ ಗಾಂಧಿ ಅಧಿಕೃತ ಖಾತೆಯಿಂದ ಮಾಡಲಾದ ಟ್ವೀಟ್​ ಸರಿಯಾಗಿಯೇ ಇತ್ತು. ಅದನ್ನು ಯಾರೋ ತಿರುಚಿ, ವೈರಲ್ ಮಾಡಿದ್ದಾರೆ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

    ಕೆಲವೇ ದಿನಗಳ ಹಿಂದೆ ರಾಹುಲ್​ ಗಾಂಧಿಯವರ ಅಧಿಕೃತ ಖಾತೆಯಿಂದ ಮಾಡಲಾಗಿದೆ ಎನ್ನಲಾದ ಮತ್ತೊಂದು ಟ್ವೀಟ್​ ವೈರಲ್ ಆಗಿತ್ತು. ಶಾಲೆ ಮತ್ತು ಕಾಲೇಜುಗಳು ಜೂ.1ರಿಂದ ಸಮ-ಬೆಸ ಮಾದರಿಯಲ್ಲಿ ಶುರುವಾಗಬೇಕು. ಒಂದು ದಿನ ಶಿಕ್ಷಕರು ಬಂದರೆ, ಮತ್ತೊಂದು ದಿನ ಮಕ್ಕಳು ಬರುವಂತೆ ನಿಯಮ ರೂಪಿಸಬೇಕು ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾಗಿ ವೈರಲ್ ಆಗಿತ್ತು. ಅನೇಕರು ಇದನ್ನು ನೋಡಿ ಟೀಕಿಸಿದ್ದರು. ಆದರೆ ಅದು ಸುಳ್ಳು, ತಿರುಚಲಾದ ಟ್ವೀಟ್​ ಎಂಬುದು ನಂತರ ಫ್ಯಾಕ್ಟ್​ಚೆಕ್​ನಿಂದ ಗೊತ್ತಾಗಿತ್ತು. (ಏಜೆನ್ಸೀಸ್)

     

    ಸುಶಾಂತ್​ ಸಿಂಗ್​​ ಓರ್ವ ನಟ ಎಂಬುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ? ಮತ್ತೊಂದು ಎಡವಟ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts