ಸ್ವಹಿತ ಬಯಸುವವರು ಹೆಚ್ಚಿದರೆ ಲೋಕಹಿತ ಕಾಯುವುದು ಕಷ್ಟ

DVG
Published on
ಸುಲಭವೇನಲ್ಲ ನರಲೋಕಹಿತನಿರ್ಧಾರ|
ಬಲಕೆ ನೋಳ್ಪರ್ ಕೆಲರು, ಕೆಲರೆಡಕೆ ನೋಳ್ಪರ್||
ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ|
ನೆಲೆಗೊತ್ತು ಹಿತಕೆಲ್ಲಿ?-ಮಂಕುತಿಮ್ಮ||855||

ನರಲೋಕಕ್ಕೆ ಯಾವುದು ಹಿತ ಎನ್ನುವ ನಿರ್ಧಾರವು ಸುಲಭವೇನಲ್ಲ. ಕೆಲವರು ಬಲಕ್ಕೆ ನೋಡಿದರೆ ಇನ್ನು ಕೆಲವರು ಎಡಕ್ಕೆ ನೋಡುತ್ತಾರೆ. ಚಪಲತೆಯಿಂದ ವಿಲವಿಲನೆ ಒದ್ದಾಡುವ ಮನುಷ್ಯ ಸ್ವಭಾವದಲ್ಲಿ ಹಿತಕ್ಕೆ ಸರಿಯಾದ ನೆಲೆ ಯಾವುದು? ಎಂದು ಪ್ರಶ್ನಿಸುತ್ತದೆ ಈ ಕಗ್ಗ. ಒಂದೇ ಪರಿಸರ, ಸಂಸ್ಕಾರದಲ್ಲಿ ಬೆಳೆದ ಒಂದೇ ತಾಯಿಯ ಮಕ್ಕಳ ಸ್ವಭಾವ, ಅಭಿರುಚಿ, ಇಷ್ಟಗಳಲ್ಲಿ ಸಮತೆ ಇರುವುದಿಲ್ಲ. ಪ್ರತಿಯೊಬ್ಬರ ಜೀವನದ ಆದ್ಯತೆ ಮತ್ತು ಆಯ್ಕೆಗಳು ವಿಭಿನ್ನ. ಹಾಗಾಗಿ ಸಮಷ್ಠಿಗೆ ಹಿತವೆನ್ನಿಸುವ ಯೋಜನೆ ರೂಪಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ.

ಮನುಷ್ಯ ಜೀವಿತದಲ್ಲಿ ಪಂಚೇಂದ್ರಿಯಗಳು ಜಗತ್ತನ್ನು ಗ್ರಹಿಸುವುದ ಕ್ಕಷ್ಟೇ ಸೀಮಿತವಾಗಿಲ್ಲ. ಮನಸ್ಸು ಬಾಹ್ಯ ಆಕರ್ಷಣೆ ಗಳಿಂದ ಪ್ರಚೋದಿತ ವಾಗು

ತ್ತದೆ. ಅಮಿತ ಆಸೆಗಳಿಗೆ ಸಿಲುಕಿ ವಿವೇಚನಾಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಈ ಭಾವೋದ್ವೇಗದ ಸ್ಥಿತಿ ಯಿಂದಾಗಿ ವ್ಯಕ್ತಿಯು ಸರಿ- ತಪ್ಪು ನಿರ್ಣಯಿಸಲು, ನಿರ್ಧಾರಕ್ಕೆ ಬದ್ಧನಾಗಿರಲು, ಸನ್ನಿವೇಶ ಅರ್ಥೈಸಿ ಕೊಳ್ಳಲು ಅಸಮರ್ಥನಾಗಿ, ಸ್ವಹಿತವನ್ನೂ ನಿರ್ಧರಿಸಲಾಗದೆ ಉಳಿಯುವುದಿದೆ.

ಮನುಷ್ಯನ ಈ ಗೊಂದಲದ ಸ್ಥಿತಿಗೆ ನಿಸರ್ಗದತ್ತವಾಗಿ ಅವನಲ್ಲಿ ಅಸಮವಾಗಿ ಬೆರೆತಿರುವ ಸತ್ತ್ವ,ರಜೋ ಮತ್ತು ತಮೋಗುಣಗಳು ಮುಖ್ಯ ಕಾರಣ. ಇದರಿಂದಾಗಿ ವ್ಯಕ್ತಿಯ ಸ್ವಭಾವ, ಚಿಂತನಾ ಕ್ರಮಗಳು ಬದಲಾಗುತ್ತಿರುತ್ತವೆೆ. ತನ್ನನ್ನೇ ತಾನರಿಯದಿರುವ ಸ್ಥಿತಿಯಲ್ಲಿ ಹಿತ-ಅಹಿತಗಳನ್ನು ಗ್ರಹಿಸಲು ಸಾಧ್ಯವಿದೆಯೇ? ಅದರಲ್ಲೂ ಕಾಮ, ಕ್ರೋಧ, ಲೋಭವೇ ಮೊದಲಾದ ಆರು ಬಗೆಯ ಹಗೆಗಳಿಗೆ ಸಿಲುಕಿ ತೊಳಲಾಡುವ ಮನಸ್ಸು ಲೋಕಹಿತವನ್ನು ಬಯಸಲುಂಟೆ? ಸ್ವಾರ್ಥ ಮತ್ತು ಮೋಹ ವ್ಯಕ್ತಿಯನ್ನು ಸಂಕುಚಿತಗೊಳಿಸುತ್ತದೆ. ಇತರರು ಕರುಬುವಂತೆ ಸುಖ-ಭೋಗಗಳನ್ನು ಅನುಭವಿಸಬೇಕು ಎನ್ನುವ ಬದುಕಿನ ಗುರಿ ಹೊಂದಿರುವವರಿಗೆ ಸರ್ವರ ಹಿತವು ಪಥ್ಯವಾಗಲಾರದು. ಈ ಸಂಕುಚಿತ ದೃಷ್ಟಿಯಿಂದಾಗಿ ವ್ಯಕ್ತಿಯು ದುರ್ಬಲನಾಗಿ ಬಾಳುತ್ತಾನೆ. ಸಮಾಜದಲ್ಲಿ ಹೀಗೆ ಸ್ವಹಿತವನ್ನು ಬಯಸುವವರ ಸಂಖ್ಯೆಯು ಹೆಚ್ಚಿದಂತೆಲ್ಲಾ ಲೋಕಹಿತ ಕಾಯುವುದು ಕಷ್ಟವಾಗುತ್ತದೆ. ಹಾಗಾಗಿ ಸವೋದಯ, ಸರ್ವಹಿತವೆನ್ನುವುದು ಈಗ ಅಪ್ರಸ್ತುತವಾಗಿವೆ. ಉದಾತ್ತವಾದ ಉದ್ದೇಶದಿಂದ ಕೈಗೊಂಡ ಯೋಜನೆಗಳು ಕೂಡ ಟೀಕೆಗೆ ಒಳಗಾಗುತ್ತವೆ. ಉತ್ತಮವಾದುದು ಎನ್ನುವುದನ್ನು ತಿಳಿದಿದ್ದರೂ ತಮ್ಮ ಲಾಭವನ್ನು ಮಾತ್ರ ಹುಡುಕುವವರಿಗೆ ಅದು ತಪ್ಪಾಗಿ ಕಾಣುತ್ತದೆ. ಸಮಾಜಕ್ಕೆ ತೊಂದರೆಯಾಗುತ್ತದೆ ಎಂದು ಅರಿತಿದ್ದರೂ ತಮ್ಮ ಅನುಕೂಲಕ್ಕಾಗಿ ಕೆಡುಕನ್ನು ಪೋಷಿಸುವವರು ಹಲವರಿದ್ದಾರೆ. ಹೀಗಿರುತ್ತಾ ಮನುಷ್ಯ ಹಿತವನ್ನು ಬಯಸುವ ನಿರ್ಧಾರವನ್ನು ಕೈಗೊಳ್ಳುವುದು ಸುಲಭಸಾಧ್ಯವಲ್ಲ. ಕೆಲವರು ಬಲಕ್ಕೆ ನೋಡಿದರೆ ಇನ್ನು ಕೆಲವರು ಎಡಕ್ಕೆ ತಿರುಗುತ್ತಾರೆ. ಅದೊಂದು ಕುಗ್ರಾಮ. ಯಾವ ಮೂಲ ಸೌಕರ್ಯಗಳೂ ಇಲ್ಲದ, ಅನಕ್ಷರಸ್ಥರೆ ತುಂಬಿರುವ ಊರು. ಸಮಾಜ ಸೇವಕಮೊಬ್ಬನು ಆ ಹಳ್ಳಿಗೆ ಬಂದ. ಊರಿನ ಜನರ ವಿಶ್ವಾಸವನ್ನು ಗಳಿಸಿ ಹಿರಿಯರಿಗೆ, ಮಕ್ಕಳಿಗೆ ಅಕ್ಷರ ಜ್ಞಾನವನ್ನು ಕೊಡಿಸಿದ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪರಿಚಯಿಸಿದ. ಹಳ್ಳಿಯವರನ್ನು ಸಂಘಟಿಸಿ ತಮ್ಮ ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೊಂದುವಂತೆ ಹೊಸ ಕ್ರಾಂತಿ ಮಾಡಿದ. ಬರುಬರುತ್ತಾ ಗ್ರಾಮವು ನಗರವಾಯಿತು. ದಾರಿದ್ರ್ಯ, ಅಜ್ಞಾನಗಳು ತೊಲಗಿ ಹಳ್ಳಿಯನ್ನು ಹೊರಪ್ರಪಂಚವು ಗುರುತಿಸುವಂತಾಯಿತು. ಹಲವರು ಆ ಸಮಾಜಸೇವಕನ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಇನ್ನು ಕೆಲವರು ಹೀಗೆ ಬದಲಾವಣೆಯನ್ನು ತಂದು ಆ ಹಳ್ಳಿಯು ತನ್ನ ನೈಜಸೌಂದರ್ಯವನ್ನು, ಮುಗ್ದತೆ ಯನ್ನು ಕಳೆದುಕೊಳ್ಳುವಂತಾಯಿತು. ತಮ್ಮ ಪಾಡಿಗೆ ತಾವು ಬದುಕುತ್ತಿ ದ್ದವರನ್ನು ಬದಲಾಯಿಸಿ ಎಡಬಿಡಂಗಿಗಳಂತೆ ಮಾಡಲಾಗಿದೆ ಎಂದೆಲ್ಲ ಆರೋಪಿಸಿದರು. ಆ ಸಮಾಜ ಸೇವಕ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಕೆಲವನ್ನು ತಾನು ಮಾಡುತ್ತಲೇ ಇದ್ದ.

ಸತ್ಕಾರ್ಯಗಳೆಂದಿಗೂ ಸೋಲುವುದಿಲ್ಲ. ಆದರೆ ಬಹಳಷ್ಟು ಅಡೆ-ತಡೆಗಳನ್ನು ಎದುರಿಸುತ್ತವೆ. ಯಾವ ಕಾರ್ಯವನ್ನೂ ಪೂರ್ತಿ ಲೋಕವೇ ಒಪ್ಪುವಂತೆ ಮಾಡಲು ಸಾಧ್ಯವಿಲ್ಲ. ಅಂತರಂಗಕ್ಕೆ ತನ್ನ ಸಂಕಲ್ಪದ ಬಗೆಗೆ ಸ್ಪಷ್ಟತೆ ಇರಬೇಕು. ಸಾಧಕ-ಬಾಧಕಗಳನ್ನು ಪರಾಮಶಿಸಿ ತೆಗೆದುಕೊಂಡ ಮಹೋನ್ನತ ನಿರ್ಣಯಗಳು ನಿಂದನೆಗಳನ್ನು ಮೀರಿ ಲೋಕಕ್ಕೆ ಒಳಿತನ್ನುಂಟು ಮಾಡುತ್ತವೆ. ಇಷ್ಟಕ್ಕೂ ಸತ್ಯ, ನ್ಯಾಯ, ಅಹಿಂಸೆ ಮುಂತಾದ ಮಾನವೀಯ ಮೌಲ್ಯಗಳು ಸರ್ವಕಾಲಕ್ಕೂ ಮಾನ್ಯವಾದುದೇ ಅಲ್ಲವೇನು? ಕ್ರೌರ್ಯ, ಹಿಂಸೆ, ವಂಚನೆ ಮುಂತಾದ ದುಷ್ಕೃತ್ಯಗಳು ಎಲ್ಲಾ ಕಾಲಕ್ಕೂ ತಿರಸ್ಕೃತವೇ. ಈ ಅರಿವು ಬೆಳೆದವರು ಯಾರ ಅನುಮತಿಗೂ ಕಾಯದೆ ಸತ್ಕಾರ್ಯವನ್ನು ಮಾಡುತ್ತಾರೆ. ಸರ್ವರ ಹಿತ ಮತ್ತು ಲೋಕಹಿತವೆರಡೂ ಬೇರೆಬೇರೆಯಲ್ಲ ಎಂದು ಅರಿತವರಲ್ಲಿ ಸಂಕಲ್ಪಶುದ್ಧಿಯೂ ಸಂಕಲ್ಪ ಶಕ್ತಿಯೂ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net