

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ಯಶಸ್ಸಿನೊಂದಿಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ಯಶಸ್ಸು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಕ್ರೆಡಿಟ್ ಸಲುವಾಗಿ ಕೆಸರೆರಚಾಟಕ್ಕೆ ಕಾರಣವಾಗಿದೆ.
ಚಂದ್ರಯಾನ-3 ನಮ್ಮ ಸರ್ಕಾರದ ಕಾಲದಲ್ಲಿ ಯಶಸ್ವಿಯಾಯಿತು ಎಂದು ಬಿಜೆಪಿಗರು, ಇಸ್ರೋ ಆರಂಭವಾಗಿದ್ದೇ ನಮ್ಮ ಸರ್ಕಾರದ ಕಾಲದಲ್ಲಿ ಎಂದು ಕಾಂಗ್ರೆಸಿಗರು ಕ್ರೆಡಿಟ್ ಗಿಟ್ಟಿಸಿಕೊಳ್ಳಲು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಮಧ್ಯೆ ಮುಂದಿನ ಚುನಾವಣೆಯಲ್ಲಿ ಇಸ್ರೋವನ್ನೇ ಬಿಜೆಪಿ ಚುನಾವಣಾ ಪ್ರಚಾರದ ಸಾಧನವನ್ನಾಗಿ ಬಳಸಿಕೊಳ್ಳಲಿದೆ ಎಂದು ತೃಣಮೂಲ ಕಾಂಗ್ರೆಸ್ನ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಇಸ್ರೋ ಈಗ ಬಿಜೆಪಿಯ 2024ರ ಪ್ರಚಾರದ ಸಾಧನವಾಗಿದೆ. ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯತೆಯ ಉನ್ಮಾದವನ್ನು ಪ್ರಚೋದಿಸಲು ಪ್ರತಿಯೊಂದು ತಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ದಶಕಗಳ ಕಾಲದ ಭಾರತೀಯ ವೈಜ್ಞಾನಿಕ ಸಂಶೋಧನೆಯನ್ನು ಮೋದಿ ಇದ್ದರೆ ಮ್ಯಾಜಿಕ್ ಸಾಧ್ಯ ಎಂದು ಪ್ಯಾಕೇಜ್ ಮಾಡಲು ಭಕ್ತ ಮತ್ತು ಟ್ರೋಲ್ ಸೈನ್ಯವು ದಿನವಿಡೀ ಶ್ರಮಿಸುತ್ತಿದೆ. ಭಾರತೀಯರೇ ಜಾಗೃತರಾಗಿ ಎಂದಿರುವ ಈಕೆ, ನಾನು ದೇಶದ್ರೋಹಿಯಲ್ಲ ಎಂದೂ ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು ಇನ್ನೊಂದು ಎಕ್ಸ್ ಮಾಡಿದ್ದ ಈಕೆ, ನಿಜ.. ಇಸ್ರೋ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದೆ, ಇದು ಮೊದಲನೆಯದ್ದೇನಲ್ಲ. ನರೇಂದ್ರ ಮೋದಿ ಚಂದ್ರನ ಮೇಲೆ ಇಳಿದಿಲ್ಲ ಅಥವಾ ಬಿಜೆಪಿ ಐಟಿ ಸೆಲ್ ಚಂದ್ರಯಾನಕ್ಕಾಗಿ ಸಂಶೋಧನೆ ಕೈಗೊಂಡಿಲ್ಲ ಎಂದು ನಾವು ಬಿಜೆಪಿಗೆ ನೆನಪಿಸಬೇಕಾಗಿದೆ ಎಂದಿದ್ದರು.