

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆ ಚಂದ್ರಯಾನ-3 ಯಶಸ್ವಿಯಾದ ಬಳಿಕ ಇಸ್ರೋ ಸಂಸ್ಥೆ ಮತ್ತು ಅಲ್ಲಿನ ಅಧಿಕಾರಿಗಳ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತೊಂದೆಡೆ ಇಸ್ರೋದವರಿಗೆ 17 ತಿಂಗಳುಗಳಿಂದ ವೇತನ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಇಸ್ರೋದವರ ಸಂಬಳ ವಿಚಾರ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ ಈ ಸಲ ಅದು ಆರೋಪ ರೀತಿಯಲ್ಲೂ ಅಲ್ಲ, ನಕಾರಾತ್ಮಕವಾಗಿಯೂ ಅಲ್ಲ, ಬದಲಿಗೆ ಸಕಾರಾತ್ಮಕವಾಗಿ ಸುದ್ದಿಯಾಗಿದೆ.
ಇಸ್ರೋದವರಿಗೆ ವೇತನವನ್ನು ಹೆಚ್ಚಿಸಬೇಕು ಎಂಬ ದನಿಯೊಂದು ಕೇಳಿಬಂದಿದೆ. ಅಷ್ಟಕ್ಕೂ ಇಂಥ ಒಂದು ಅಭಿಪ್ರಾಯ ನೀಡಿದ್ದು ಬೇರೆ ಯಾರೂ ಅಲ್ಲ, ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್. ಚಂದ್ರಯಾನ-3ರ ಯಶಸ್ಸಿನ ಹಿನ್ನೆಲೆಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಅವರು ಇಸ್ರೋ ಅಧಿಕಾರಿಗಳ ವೇತನ ಹೆಚ್ಚಳದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಇಸ್ರೋದವರು ಹೆಚ್ಚಿನ ಸಂಭಾವನೆಗಾಗಿ ದನಿ ಎತ್ತುವುದಿಲ್ಲ, ಬದಲಿಗೆ ಅವರು ತಾಂತ್ರಿಕ ಸವಾಲುಗಳನ್ನು ಗುರುತಿಸಿ ಕಡಿಮೆ ಖರ್ಚಿನಲ್ಲಿ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸುತ್ತಾರೆ. ಇಸ್ರೋ ವಿಜ್ಞಾನಿಗಳು ತಮ್ಮ ಕುಟುಂಬ ಜೀವನ ಮರೆತು ದಿನದ 24 ಗಂಟೆ ಕೆಲಸದಲ್ಲಿದ್ದಾರೆ. ಗುರಿಯನ್ನು ಸಾಧಿಸಲು ವೈಯಕ್ತಿಕ ತ್ಯಾಗಗಳನ್ನು ಮಾಡುವ ಉತ್ಸಾಹ ಹೊಂದಿದ್ದಾರೆ. ಸಂಭಾವನೆ ಹೆಚ್ಚಳ ಮತ್ತು ಪ್ರಶಸ್ತಿಗಳ ಮೂಲಕ ಅವರ ಪ್ರಯತ್ನಗಳನ್ನು ಸರ್ಕಾರ ಗುರುತಿಸಬೇಕು. ಕಳೆದ ವೇತನ ಆಯೋಗ ಸಂಬಳ ಹೆಚ್ಚಿಸಿದ್ದರೂ ಅದು ಸಾಲದು ಎಂದಿರುವ ಮಾಧವನ್ ನಾಯರ್, ಇಸ್ರೋ ವಿಜ್ಞಾನಿಗಳ ವೇತನ ಹೆಚ್ಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.