

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ಪೊಲೀಸರಿಂದ ಬಗೆಹರಿಯಬಹುದಾದ ಕುಂದು-ಕೊರತೆಗಳಿದ್ದಲ್ಲಿ ನೇರವಾಗಿ ಪೊಲೀಸ್ ಕಮಿಷನರ್ ಅವರನ್ನೇ ಭೇಟಿ ಆಗಬಹುದು. ಈ ಕುರಿತು ಖುದ್ದು ಆಯುಕ್ತರೇ ಮಾಹಿತಿ ಹಂಚಿಕೊಂಡಿದ್ದಾರೆ.
ಮಾಸಿಕ ಜನಸಂಪರ್ಕ ಸಭೆ ಕುರಿತ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಈ ವಿಷಯ ತಿಳಿಸಿದ್ದಾರೆ. ನಾನು ಕೇಂದ್ರ ವಿಭಾಗದವರು ಕುಮಾರಕೃಪಾ ರಸ್ತೆಯ ಗಾಂಧಿಭವನದ ವಿನೋಬಾ ಸಭಾಂಗಣದಲ್ಲಿ ಆಯೋಜಿಸಿರುವ ಈ ತಿಂಗಳ ಮಾಸಿಕ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿಸಲಿದ್ದೇನೆ. ಸಾರ್ವಜನಿಕರು ತಮ್ಮ ಕುಂದುಕೊರತೆ ಅಥವಾ ಸಲಹೆಗಳು ಇದ್ದಲ್ಲಿ ಸಂಪರ್ಕಿಸಬಹುದು. ಹಿಂದಿನ ಸಲದಂತೆ ಈ ಸಲವೂ ಇತರ ಇಲಾಖೆಯ ಅಧಿಕಾರಿಗಳನ್ನು ಕೂಡ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆ. 27ರ ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಈ ಜನಸಂಪರ್ಕ ಸಭೆ ನಡೆಯಲಿದೆ. ಇಲ್ಲಿ ಮಾತ್ರವಲ್ಲದೆ ನಗರದ ಎಲ್ಲ ಠಾಣೆಗಳಲ್ಲೂ ಸಹ ಈ ಜನಸಂಪರ್ಕ ಸಭೆಗಳು ಇದೇ ಸಮಯದಲ್ಲಿ ನಡೆಯಲಿದ್ದು ಸಾರ್ವಜನಿಕರು ತಮ್ಮ ಹತ್ತಿರದ ಠಾಣೆಗಳಿಗೆ ಹೋಗಿ ಕೂಡ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.