

ಹೈದರಾಬಾದ್: ದೇವಸ್ಥಾನಕ್ಕೆ ಬಂದಿದ್ದ ಭಕ್ತನೊಬ್ಬ 100 ಕೋಟಿ ರೂ. ಮೊತ್ತ ನಮೂದಿಸಿದ್ದ ಚೆಕ್ ದೇಣಿಗೆಯಾಗಿ ನೀಡಿದ್ದಾನೆ. ಇದುವರೆಗೆ ಯಾರೂ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ನೀಡದ್ದರಿಂದ ಅಚ್ಚರಿಗೊಂಡ ದೇವಸ್ಥಾನದ ಆಡಳಿತ ಮಂಡಳಿಗೆ, ಆ ಚೆಕ್ ನಗದೀಕರಿಸಿಕೊಳ್ಳಲು ಹೋಗಿದ್ದಾಗ ಅದಕ್ಕಿಂತಲೂ ದೊಡ್ಡ ಅಚ್ಚರಿ ಉಂಟಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂ ಎಂಬಲ್ಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಈ ಪ್ರಕರಣ ನಡೆದಿದೆ. ಆರಂಭದಲ್ಲಿ ಈತ ಚೆಕ್ನಲ್ಲಿ 10 ಎಂಬುದನ್ನಷ್ಟೇ ಬರೆದಿದ್ದು, ಬಳಿಕ ಸೊನ್ನೆಗಳನ್ನು ಸೇರಿಸುತ್ತ ಹೋಗಿದ್ದು, ನೂರು ಕೋಟಿ ರೂ. ಎಂದು ನಮೂದಿಸಿದ್ದಾನೆ. ಹೀಗೆ ಭರ್ಜರಿ ಮೊತ್ತದ ದೇಣಿಗೆಯ ಚೆಕ್ ನೋಡಿ ಆಡಳಿತ ಸಿಬ್ಬಂದಿ ಅಚ್ಚರಿಗೊಂಡಿದ್ದರು.