

ನವದೆಹಲಿ: ಪ್ಲ್ಯಾಸ್ಟಿಕ್ ಕಪ್ ಬದಲು ಪೇಪರ್ ಕಪ್ ಬಳಕೆ ಉತ್ತಮ, ಅದು ಪ್ಲ್ಯಾಸ್ಟಿಕ್ ಕಪ್ಗೆ ಪರ್ಯಾಯ ಎಂಬ ಅಭಿಪ್ರಾಯವಿದೆ. ಅದೇ ರೀತಿ ಪ್ಲ್ಯಾಸ್ಟಿಕ್ ಕಪ್ಗಳಿಗೆ ಬದಲಾಗಿ ಪೇಪರ್ ಕಪ್ಗಳ ಬಳಕೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ ಪರಿಸರಕ್ಕೆ ಪೇಪರ್ ಕಪ್ ಕೂಡ ಪ್ಲ್ಯಾಸ್ಟಿಕ್ ಕಪ್ನಷ್ಟೇ ಹಾನಿಕರ ಎಂಬುದು ಬಹಿರಂಗಗೊಂಡಿದೆ.
ಸ್ವೀಡನ್ನ ಯುನಿವರ್ಸಿಟಿ ಆಫ್ ಗೊಥೆನ್ಬರ್ಗ್ ನಡೆಸಿದ್ದ ಅಧ್ಯಯನವೊಂದರಲ್ಲಿ ಈ ವಿಷಯ ಕಂಡುಬಂದಿದೆ. ಬಳಸಿ ಎಸೆಯಬಹುದಾದ ಕಪ್ಗಳ ದುಷ್ಪರಿಣಾಮಗಳ ಕುರಿತು ಬಟರ್ಫ್ಲೈ ಮಾಸ್ಕಿಟೋಗಳ ಲಾರ್ವಾದ ಮೇಲೆ ನಡೆಸಿದ ಅಧ್ಯಯನದಲ್ಲಿ ಇದು ತಿಳಿದುಬಂದಿದೆ.
ನಾವು ಪೇಪರ್ ಹಾಗೂ ಪ್ಲ್ಯಾಸ್ಟಿಕ್ ಕಪ್ಗಳೆರಡನ್ನೂ ಒದ್ದೆಯಾದ ಕೆಸರು ಹಾಗೂ ಮಣ್ಣಿನಲ್ಲಿ ಇರಿಸಿ ಕೆಲವು ವಾರಗಳ ಕಾಲ ನೀರು ಹಾಕಿದ್ದೆವು. ಅಲ್ಲದೆ ಆ ಕಪ್ಗಳಿಂದ ಬಿಡುಗಡೆ ಆದ ರಾಸಾಯನಿಕಗಳು ಲಾರ್ವಾಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನೂ ಗಮನಿಸಿದ್ದೆವು. ಎರಡೂ ಥರದ ಕಪ್ಗಳು ಮಾಸ್ಕಿಟೋ ಲಾರ್ವಾದ ಬೆಳವಣಿಗೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಿರುವುದು ಕಂಡುಬಂದಿದೆ ಎಂದು ಯುನಿವರ್ಸಿಟಿ ಆಫ್ ಗೊಥೆನ್ಬರ್ಗ್ನ ಎನ್ವಿರಾನ್ಮೆಂಟಲ್ ಸೈನ್ಸ್ ಪ್ರೊಫೆಸರ್ ಬೆಥನಿ ಕಾರ್ನೆ ಅಲ್ಮೊರ್ಥ್ ತಿಳಿಸಿದ್ದಾರೆ.
ಫುಡ್ ಪ್ಯಾಕೇಜಿಂಗ್ನಲ್ಲಿ ಬಳಸಲಾಗುವ ಕಾಗದದ ಮೇಲೆ ರಾಸಾಯನಿಕದ ಲೇಪ ಇರುತ್ತದೆ. ಕಾಫಿ ಕಪ್ನಲ್ಲಿರುವ ಇಂಥ ಲೇಪ ಕಾಫಿಯಿಂದ ಪೇಪರ್ ಒದ್ದೆ ಆಗದಂತೆ ನೋಡಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಇಂಥ ರಾಸಾಯನಿಕಗಳ ಲೇಪವನ್ನು ಪಾಲಿಲ್ಯಾಕ್ಟೈಡ್ನಿಂದ ಮಾಡಲಾಗಿರುತ್ತದೆ.
ಇಂಥ ಬಯೋಪ್ಲಾಸ್ಟಿಕ್ಗಳನ್ನು ಜೋಳ, ಕಬ್ಬು ಮುಂತಾದ ಮರುಸಂಸ್ಕರಿಸಬಹುದಾದ ವಸ್ತುಗಳಿಂದ ಮಾಡಲಾಗಿರುತ್ತದೆ. ಇದು ಬಯೋಡಿಗ್ರೇಡೇಬಲ್ ಎಂದು ಹೇಳಲಾಗಿದ್ದರೂ ಅಂದರೆ ಇವು ನಿಗದಿತ ಪರಿಸರದಲ್ಲಿ ಆಯಿಲ್ ಬೇಸ್ಡ್ ಪ್ಲ್ಯಾಸ್ಟಿಕ್ಗಳಿಂತ ವೇಗವಾಗಿ ವಿಘಟನೆ ಹೊಂದುವಂಥದ್ದಾಗಿದ್ದರೂ ಇವು ಕೂಡ ಹಾನಿಕಾರಕವಾಗಿರುತ್ತವೆ ಎಂದು ಎನ್ವಿರಾನ್ಮೆಂಟಲ್ ಪೊಲ್ಯುಷನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಬಯೋಪ್ಲಾಸ್ಟಿಕ್ಗಳು ಪರಿಸರ ಮತ್ತು ನೀರಿನಲ್ಲಿ ಪರಿಣಾಮಕಾರಿಯಾಗಿ ಬೆರೆತು ಹೋಗುವುದಿಲ್ಲ ಎನ್ನಲಾಗಿದೆ.