

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷ ಭಾನುವಾರ 9ನೇ ದಿನ ಪ್ರವೇಶಿಸಿದ್ದು ಪ್ಯಾಲೆಸ್ತೀನ್ ನಾಗರಿಕರು ಉತ್ತರ ಗಾಜಾದಿಂದ ಸಮುದ್ರ ತೀರದ ದಕ್ಷಿಣ ಭಾಗಗಳಿಗೆ ತೆರಳಲು ಇಸ್ರೇಲ್ ‘ಸುರಕ್ಷಿತ ಕಾರಿಡಾರ್’ ತೆರೆದಿದೆ. ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ, ಅಂದರೆ ಮೂರು ತಾಸು ಕಾಲ ಈ ಕಾರಿಡಾರ್ನಲ್ಲಿ ಯಾವುದೇ ದಾಳಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿತ್ತು. ಈ ಅವಧಿಯೊಳಗೆ ‘ಸುರಕ್ಷಿತವಾಗಿ’ ತೆರಳುವಂತೆ ಗಡುವು ವಿಧಿಸಿತ್ತು. ತನ್ನ ಇತಿಹಾಸದಲ್ಲೇ ನಡೆದ ಮಾರಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಸರ್ವ ಸನ್ನದ್ಧವಾಗಿದ್ದು ಹಮಾಸ್ ಅನ್ನು ಸರ್ವನಾಶ ಮಾಡುವುದಾಗಿ ಘೋಷಿಸಿದೆ.
‘ನಿಮ್ಮ ಸುರಕ್ಷತೆಗಾಗಿ ದಕ್ಷಿಣದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಗಾಜಾ ನಗರ ಮತ್ತು ಉತ್ತರ ಗಾಜಾದ ನಿವಾಸಿಗಳಿಗೆ ನಾವು ಆಗ್ರಹಿಸಿದ್ದೆವು’ ಎಂದಿರುವ ಐಡಿಎಫ್, ಮೂರು ಗಂಟೆಯ ಗಡುವನ್ನು ಬಳಸಿಕೊಳ್ಳಿ ಎಂದು ಎಕ್ಸ್ನಲ್ಲಿ ತಿಳಿಸಿತ್ತು. ಇದಕ್ಕೂ ಮುನ್ನ, ಜನರು ದಕ್ಷಿಣ ಗಾಜಾಕ್ಕೆ ತೆರಳುವುದನ್ನು ಹಮಾಸ್ ಗುಂಪು ತಡೆಯುತ್ತಿರುವುದನ್ನು ತೋರಿಸುವ ಚಿತ್ರಗಳನ್ನು ಇಸ್ರೇಲಿ ಮಿಲಿಟರಿ ಬಿಡುಗಡೆಗೊಳಿಸಿತ್ತು. ಮಾನವರನ್ನು ಗುರಾಣಿಗಳಾಗಿ ಹಮಾಸ್ ಗುಂಪು ಬಳಸುತ್ತಿದೆ ಎಂದು ಅದು ಆರೋಪಿಸಿತ್ತು.
ಪಲಾಯನಕ್ಕೆ ವಿಳಂಬ ಮಾಡದಿರುವಂತೆ ಇಸ್ರೇಲಿ ಮಿಲಿಟರಿ ವಕ್ತಾರ ರಿಚರ್ಡ್ ಹೆಚ್ಟ್, ಹಮಾಸ್ ನಾಯಕರ ನೆಲೆಯಾಗಿರುವ ಉತ್ತರ ಗಾಜಾದ ನಾಗರಿಕರಿಗೆ ಒತ್ತಾಯಿಸಿದ್ದಾರೆ. ‘ನಾವು ಗಾಜಾ ಮೇಲೆ ವೈಮಾನಿಕ, ಸಮುದ್ರ ಮತ್ತು ಭೂ ದಾಳಿ ನಡೆಸುತ್ತೇವೆ’ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವಾರದ ಆಘಾತಕಾರಿ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ‘ಬಹಳಷ್ಟು ಮಾಡಲಿದೆ’ ಎಂದು ಹೇಳಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾನಹು, ಅದಕ್ಕಾಗಿ ಸಿದ್ಧರಾಗಿ ಎಂದು ಸೈನಿಕರನ್ನು ಹುರಿದುಂಬಿಸಿದ್ದಾರೆ.
11 ಲಕ್ಷ ಜನರು: ಪ್ಯಾಲೆಸ್ತೀನ್ನ ಒಟ್ಟು 24 ಲಕ್ಷ ಜನರ ಪೈಕಿ ಅಂದಾಜು ಅರ್ಧದಷ್ಟು, ಅಂದರೆ 11 ಲಕ್ಷ ಮಂದಿ ಗಾಜಾದ ಉತ್ತರ ಭಾಗದಲ್ಲಿದ್ದಾರೆ. ಯುದ್ಧ ನಡೆಯುತ್ತಿರುವುದರಿಂದ ಅವರನ್ನು ಬೇರೆಡೆ ಸ್ಥಳಾಂತರಗೊಳ್ಳಲು ಬಲವಂತ ಮಾಡುವುದು ಸರಿಯಲ್ಲ ಎಂದು ನೆರವಿನ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ಮಾನವೀಯ ಬಿಕ್ಕಟ್ಟು: ಇಸ್ರೇಲಿ ಪಡೆಗಳು ಸರಬರಾಜು ತಡೆಗಟ್ಟಿರá-ವುದರಿಂದ ಆಹಾರ, ನೀರು, ಇಂಧನ ಮತ್ತು ವೈದ್ಯಕೀಯ ಸಾಮಗ್ರಿಗಳ ಕೊರತೆಯಾಗಿದೆ. ಇದರಿಂದ ಮಾನವೀಯ ಬಿಕ್ಕಟ್ಟು ಉಂಟಾಗಲಿದೆ ಎಂದು ಅಂತಾರಾಷ್ಟ್ರೀಯ ನೆರವಿನ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಗಾಜಾದಲ್ಲಿನ ಪರಿಸ್ಥಿತಿ ‘ಅಪಾಯಕಾರಿ ಹೊಸ ಕೆಳಮಟ್ಟಕ್ಕೆ ಇಳಿದಿದೆ’ ಎಂದು ವಿಶ್ವ ಸಂಸ್ಥೆ ಮಹಾ ಕಾರ್ಯದರ್ಶಿ ಅಂತೋನಿಯೋ ಗುಟೆರಸ್ ವಿಷಾದಿಸಿದ್ದಾರೆ.
ಇನ್ನೂ 197 ಭಾರತೀಯರ ಆಗಮನ: ಇಸ್ರೇಲ್ನನಲ್ಲಿದ್ದ ಭಾರತೀಯರ ಪೈಕಿ ಇನ್ನೂ 197 ಜನರನ್ನು ಹೊತ್ತ 3ನೇ ವಿಮಾನ ಭಾನುವಾರ ನವದೆಹಲಿಗೆ ಆಗಮಿಸಿತು. ಇಸ್ರೇಲ್ನಲ್ಲಿರುವ ಅಂದಾಜು 18,000 ಭಾರತೀಯರನ್ನು ವಾಪಸ್ ಕರೆತರಲು ಪ್ರಧಾನಿ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭಿಸಿದ್ದು ಗುರುವಾರ ನೋಂದಣಿ ಆರಂಭವಾಗಿದೆ. ಇಸ್ರೇಲ್ನಿಂದ ತೆರವು ಮಾಡಿ ಕರೆತರಲಾದ ಭಾರತೀಯರನ್ನು ಕೇಂದ್ರ ಸಚಿವ ಕೌಶಲ್ ಕಿಶೋರ್ ದೆಹಲಿ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.
ಮಾನವ ಗುರಾಣಿ ಬಳಕೆ: ಇಸ್ರೇಲ್ ಬೆದರಿಕೆ ಹಿನ್ನೆಲೆಯಲ್ಲಿ ಗಾಜಾದ ದಕ್ಷಿಣ ಭಾಗಕ್ಕೆ ತೆರಳುತ್ತಿರುವ ಜನರನ್ನು ತಡೆಯುತ್ತಿರುವ ಹಮಾಸ್ ಸಂಘಟನೆ, ಇಸ್ರೇಲ್ ನಡೆಸಲಿರುವ ಬಾಂಬ್ ದಾಳಿ ತಡೆಯಲು ನಾಗರಿಕರನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಯಲ್ ಹುಲಾಟಾ ಆರೋಪಿಸಿದ್ದಾರೆ.
ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲ್ನಲ್ಲಿ ನಡೆದ ಕಿಬ್ಬುಟ್ಝ್ ಹತ್ಯಾಕಾಂಡಕ್ಕೆ ಹೊಣೆಗಾರನಾದ ಹಮಾಸ್ನ ಉನ್ನತ ಕಮಾಂಡರ್ಗಳಲ್ಲಿ ಒಬ್ಬನಾದ ಬಿಲ್ಲಾಲ್ ಅಲ್ ಕೆದ್ರಾನನ್ನು ಇಸ್ರೇಲ್ ವಾಯು ಪಡೆ (ಐಎಎಫ್) ಹತ್ಯೆ ಮಾಡಿದೆ. ಅಲ್ ಕೆದ್ರಾ, ಹಮಾಸ್ ವಿಶೇಷ ಪಡೆ ಇಝå್ ಅದ್-ದಿನ್ ಅಲ್ಲಕಸಂ ಬ್ರಿಗೇಡ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ನೌಕಾ ಪಡೆ ಕಮಾಂಡೋ ಘಟಕ ನಿಖ್ಬಾ ಪಡೆಯ ಕಮಾಂಡರ್ ಆಗಿದ್ದ. ಅಲ್ ಕೆದ್ರಾ ಗಾಜಾ ಪಟ್ಟಿಯ ದಕ್ಷಿಣಕ್ಕಿರುವ ಖಾನ್ ಯುನಿಸ್ನಲ್ಲಿರುವುದನ್ನು ಇಸ್ರೇಲಿ ಗುಪ್ತಚರ ದಳದವರು ಪತ್ತೆ ಹಚ್ಚಿದ್ದರು. ಅಲ್ಲಿ ನಡೆಸಲಾದ ವೈಮಾನಿಕ ದಾಳಿಯಲ್ಲಿ ಕೆದ್ರಾ ಮಾತ್ರವಲ್ಲದೆ, ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ನ ಇತರ ಉಗ್ರರನ್ನು ಕೂಡ ಸಾಯಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.
ಉಭಯತ್ರರ ಜತೆ ಬೈಡೆನ್ ಚರ್ಚೆ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶನಿವಾರ ಪ್ಯಾಲೆಸ್ತಿನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾನಹು ಜತೆ ದೂರವಾಣಿ ಮಾತುಕತೆ ನಡೆಸಿ ಮಾನವೀಯ ನೆರವಿನ ಕುರಿತು ರ್ಚಚಿಸಿದರು. ಬೈಡೆನ್ ಅವರು ಇಸ್ರೇಲ್ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವಿನ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಇಸ್ರೇಲ್ಗೆ ಪೂರ್ಣ ಪ್ರಮಾಣದ ಬೆಂಬಲ ಘೋಷಿಸಿರುವ ಅಮೆರಿಕ, ಇನ್ನೂ ಒಂದು ವಿಮಾನವಾಹಕ ಯುದ್ಧ ನೌಕೆಯನ್ನು ಪೂರ್ವ ಮೆಡಿಟರೇನಿಯನ್ಗೆ ರವಾನಿಸಿದೆ. ಇದು ಇಸ್ರೇಲ್ ರಕ್ಷಣೆಗೆ ಅಮೆರಿಕ ಕಳಿಸಿರುವ ಎರಡನೇ ನೌಕೆಯಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್್ಡ ಆಸ್ಟಿನ್ ತಿಳಿಸಿದ್ದಾರೆ. ಹಮಾಸ್ ದಾಳಿಯ ನಂತರ ಇಸ್ರೇಲ್ ಬೆಂಬಲವಾಗಿ ನಿಯೋಜಿಸಲಾದ ಯುಎಸ್ಎಸ್ ಐಸೆನ್ಹೋವರ್ ಮತ್ತದರ ಸಂಯೋಜಿತ ಸಮರನೌಕೆಗಳನ್ನು ಎರಡನೇ ನೌಕೆ ಸೇರಿಕೊಳ್ಳಲಿದೆ.
5 ಯುದ್ಧಗಳಲ್ಲೇ ಭೀಕರ: ಅಕ್ಟೋಬರ್ 7ರಂದು ಆರಂಭವಾದ ಇತ್ತೀಚಿನ ಹೋರಾಟದಲ್ಲಿ ಇದುವರೆಗೆ 2,329 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದು ಇದು ಪ್ಯಾಲೆಸ್ತೀನಿಯರಿಗೆ ಐದು ಗಾಜಾ ಸಮರಗಳಲ್ಲಿ ಅತ್ಯಂತ ಭೀಕರ ಯುದ್ಧವಾಗಿ ಪರಿಣಮಿಸಿದೆ. 2014ರಲ್ಲಿ ಇಸ್ರೇಲ್-ಹಮಾಸ್ ನಡುವೆ ನಡೆದ ಕಾಳಗದಲ್ಲಿ 1,462 ನಾಗರಿಕರ ಸಹಿತ 2,251 ಪ್ಯಾಲೆಸ್ತೀನಿಯರು ಹತರಾಗಿದ್ದರು ಎಂದು ವಿಶ್ವ ಸಂಸ್ಥೆಯ ಅಂಕಿಸಂಖ್ಯೆ ತಿಳಿಸಿದೆ. ಇದೀಗ ಸಾವಿನ ಸಂಖ್ಯೆ ಅದನ್ನು ಮೀರಿಸಿದೆ.
ಒಐಸಿ ತುರ್ತು ಸಭೆ: ಇಸ್ರೇಲ್-ಗಾಜಾ ಯುದ್ಧ ಕುರಿತು ರ್ಚಚಿಸಲು ಮುಸ್ಲಿಂ ದೇಶಗಳ ಕೂಟವಾದ ‘ಇಸ್ಲಾಮಿಕ್ ಸಹಕಾರ ಸಂಸ್ಥೆ’ (ಒಐಸಿ) ಬುಧವಾರ ಜೆಡ್ಡಾದಲ್ಲಿ ತುರ್ತು ಸಭೆ ಕರೆದಿದೆ. ಸಂಸ್ಥೆಯ ಪ್ರಸ್ತುತ ಅಧ್ಯಕ್ಷವಾಗಿರುವ ಸೌದಿ ಅರೇಬಿಯಾ, ಸದಸ್ಯ ದೇಶಗಳಿಗೆ ಆಹ್ವಾನ ನೀಡಿದೆ.
ಟೆಸ್ಲಾದಿಂದ ಪ್ರಾಣ ರಕ್ಷಣೆ: ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿಯಿಂದ ಪಾರಾಗಿ ಪ್ರಾಣ ರಕ್ಷಣೆ ಮಾಡಿಕೊಳ್ಳುವಲ್ಲಿ ಟೆಸ್ಲಾ ಇಲೆಕ್ಟ್ರಾನಿಕ್ ವಾಹನ ತಮಗೆ ನೆರವಾಯಿತು ಎಂದು ಇಸ್ರೇಲ್ನ ಫ್ರೀಡಂ ಪಾರ್ಟಿ ‘ಸಿ’ ಮುಖ್ಯಸ್ಥ ಗಿಲಾಡ್ ಆಲ್ಪರ್ ಹೇಳಿದ್ದಾರೆ.