

ಟೆಲ್ ಅವಿವ್: ಗಾಜಾ ಮೇಲೆ ಇಸ್ರೇಲ್ ಆರಂಭಿಸಿದ್ದ ಯುದ್ಧ ಈಗ ಲೆಬನಾನ್ ಜತೆಗೆ ಇರಾನ್ ವರೆಗೂ ವ್ಯಾಪಿಸಿದೆ. ಶನಿವಾರ ಮುಂಜಾನೆ ಇರಾನ್ನ ಹಲವು ಸ್ಥಳಗಳ ಮೇಲೆ ಇಸ್ರೇಲ್ ಪಡೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಗೆ ಇಸ್ರೇಲ್ ನಡೆಸಿದ ಪ್ರತಿಕಾರದ ಕ್ರಮ ಎಂದು ಹೇಳಲಾಗುತ್ತಿದೆ.
ತನ್ನ ಮೇಲೆ ದಾಳಿ ನಡೆಸಲು ಇರಾನ್ ಬಳಕೆ ಮಾಡಿದ್ದ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ತೈಲ ಅಥವಾ ಶಸ್ತ್ರಾಸ್ತ್ರ ಸಂಗ್ರಹಗಳ ಮೇಲೆ ದಾಳಿ ನಡೆದ ಬಗ್ಗೆ ಈವರೆಗೆ ವರದಿ ಆಗಿಲ್ಲ. ದಾಳಿಯಿಂದ ಎಷ್ಟು ಹಾನಿ ಆಗಿದೆ ಎಂಬುದನ್ನು ಎರಡೂ ದೇಶಗಳು ಅಧಿಕೃತವಾಗಿ ತಿಳಿಸಿಲ್ಲ. ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಸ್ಪೋಟಗಳು ನಡೆದವು. ಆದರೂ ಈ ಪ್ರದೇಶದಲ್ಲಿ ಸೀಮಿತ ಹಾನಿಯನ್ನು ಮಾತ್ರ ಉಂಟಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಹೇಳಿಕೊಂಡಿವೆ.
ಬೆಳಗಿನ ಜಾವದಿಂದ ಆರಂಭವಾದ ದಾಳಿ ಸೂರ್ಯೋದಯ ನಂತರವೂ ಮುಂದುವರಿದಿತ್ತು. 1980ರ ಇರಾಕ್ ಯುದ್ಧದ ನಂತರ ಇರಾನ್ನ ಮೇಲೆ ಇಸ್ರೇಲ್ನ ನಡೆಸಿದ ಮೊದಲ ದಾಳಿ ಇದಾಗಿದೆ. ಇಲಾಮ್ ಖುಜೆಸ್ತಾನ್ ಮತ್ತು ಟೆಹ್ರಾನ್ ಪ್ರಾಂತ್ಯಗಳಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಇರಾನ್ ಸೇನೆ ಹೇಳಿದೆ. ನಾಗರಿಕರಿಗೆ ಅಪಾಯ ಉಂಟುಮಾಡುವ ಸ್ಥಳಗಳ ಮೇಲೆ ಇರಾನ್ ಇತ್ತೀಚೆಗೆ ಎರಡು ಬಾರಿ ದಾಳಿ ಮಾಡಿದೆ. ಈಗ ಅದಕ್ಕೆ ತಕ್ಕ ಬೆಲೆ ಪಾವತಿಸಬೇಕಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ರಿಯರ್ ಅಡ್ಮಡೇನಿಯಲ್ ಹಗಾರಿ ತಿಳಿಸಿದ್ದಾರೆ.
ಈ ದಾಳಿಯ ಮೂಲಕ ಮಧ್ಯಪ್ರಾಚ್ಯದಾದ್ಯಂತ ಹಿಂಸಾಚಾರ ಉಲ್ಬಣಗೊಂಡು, ಸಂಪೂರ್ಣ ಯುದ್ಧ ಸ್ಥಿತಿ ನಿರ್ವಣವಾಗುವ ಅಪಾಯ ಎದುರಾಗಿದೆ. ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳಾದ ಗಾಜಾದ ಹಮಾಸ್ ಮತ್ತು ಲೆಬನಾನ್ನ ಹಿಜ್ಬುಲ್ಲಾ ಪೂರ್ಣ ಪ್ರಮಾಣದಲ್ಲಿ ಇಸ್ರೇಲ್ ವಿರುದ್ಧ ಹೋರಾಟ ನಡೆಸುತ್ತಿವೆ.
ಬಿಕ್ಕಟ್ಟಿನ ಹಿನ್ನೆಲೆ ಏನು?: ಇರಾನ್ ಮತ್ತು ಇಸ್ರೇಲ್ ನಡುವೆ ದಶಕಗಳಿಂದಲೂ ವೈರತ್ವ ಇದೆ. ಇಸ್ರೇಲ್ ವಿರೋಧಿ ಉಗ್ರಗಾಮಿಗಳಿಗೆ ಇರಾನ್ ಬೆಂಬಲ ನೀಡುತ್ತಿದೆ ಎಂಬುದು ಇದಕ್ಕೆ ಪ್ರಮುಖ ಕಾರಣ. ಕೆಲ ತಿಂಗಳ ಹಿಂದೆ ಸಿರಿಯಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಇರಾನಿ ಜನರಲ್ಗಳು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಕಳೆದ ಏಪ್ರಿಲ್ನಲ್ಲಿ ಇಸ್ರೇಲ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್ಗಳಿಂದ ದಾಳಿ ನಡೆಸಿದ್ದರೂ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ.
ಸೆಪ್ಟೆಂಬರ್ನಲ್ಲಿ ಹಿಜ್ಬುಲ್ಲಾ ಉಗ್ರ ಸಂಘಟನೆ ಬಳಸುತ್ತಿದ್ದ ನೂರಾರು ಪೇಜರ್ಗಳು ಮತ್ತು ವಾಕಿ-ಟಾಕಿಗಳು ದಿಢೀರ್ ಸ್ಪೋಟಗೊಂಡು ಹತ್ತಾರು ಹಿಜ್ಬುಲ್ಲಾ ಬೆಂಬಲಿಗರು ಮೃತಪಟ್ಟಿದ್ದರು. ಸಾವಿರಾರು ಜನರು ಗಾಯಗೊಂಡಿದ್ದರು. ನಂತರದ ದಿನಗಳಲ್ಲಿ ಬೈರುತ್ನ ಹೊರವಲಯದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ಕಾರ್ಯಾಚರಣೆಯಲ್ಲಿ ಹಿಜ್ಬುಲ್ಲಾ ಪ್ರಮುಖ ನಾಯಕ ಹಸನ್ ನಸ್ರಲ್ಲಾ ಮತ್ತು ಹಲವಾರು ಉನ್ನತ ಕಮಾಂಡರ್ಗಳು ಬಲಿಯಾಗಿದ್ದರು.
ಅ 1ರಂದು ಇರಾನ್ ಪ್ರತೀಕಾರ ಕ್ರಮವಾಗಿ ಇಸ್ರೇಲ್ ಮೇಲೆ 180 ಕ್ಷಿಪಣಿಗಳನ್ನು ಉಡಾಯಿಸಿತು. ಆದರೆ ಇಸ್ರೇಲ್ನ ‘ಐರನ್ ಡೋಮ್ ಬಹುತೇಕ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿತು. ಈ ನಡುವೆ, ಇಸ್ರೇಲ್ ದಕ್ಷಿಣ ಲೆಬನಾನ್ ಮೇಲೆ ಆಕ್ರಮಣವನ್ನು ಪ್ರಾರಂಭಿತು. ಇದರಿಂದ ಹಿಜ್ಬುಲ್ಲಾ ಮೇಲೆ ಒತ್ತಡವನ್ನು ಹೆಚ್ಚಿಸಿತು. 10 ಲಕ್ಷಕ್ಕಿಂತಲೂ ಹೆಚ್ಚು ಲೆಬನಾನ್ ಜನರು ಸ್ಥಳಾಂತರಗೊಂಡರು. ಕೆಲ ದಿನಗಳ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಥನ್ಯಾಹು ಅವರ ಖಾಸಗಿ ನಿವಾಸ ಮೇಲೆ ಇರಾನ್ ಬೆಂಬಲಿತ ಉಗ್ರಗಾಮಿಗಳು ಡ್ರೋನ್ ದಾಳಿ ನಡೆಸಿದರು. ಇದರ ಪರಿಣಾಮವಾಗಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
100ಕ್ಕೂ ಅಧಿಕ ಯುದ್ಧ ವಿಮಾನ ಬಳಕೆ: ಸುಮಾರು 100 ಫೈಟರ್ ಜೆಟ್ಗಳು ಇರಾನ್ ವಿವಿಧ 20 ಪ್ರದೇಶಗಳ ಮೇಲೆ ದಾಳಿ ನಡೆಸಿವೆ. ಕ್ಷಿಪಣಿ ಮತ್ತು ಡ್ರೋನ್ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ. ಮೊದಲ ಹಂತದಲ್ಲಿ ಇರಾನ್ನ ರೇಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ನಡೆಸಿ, ಅವುಗಳನ್ನು ಧ್ವಂಸ ಮಾಡಲಾಯಿತು. ನಂತರ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಯಿತು.
ಹಮಾಸ್ ದಾಳಿಯೇ ಮೂಲ: ಕಳೆದ ವರ್ಷ ಅಕ್ಟೋಬರ್ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ, 1,200 ಜನರನ್ನು ಕೊಂದಿದ್ದರು. ಸುಮಾರು 250 ಮಂದಿಯನ್ನು ಒತ್ತೆಯಾಳಾಗಿ ಗಾಜಾಕ್ಕೆ ಕರೆದೊಯ್ದಿದ್ದರು. ಬಿಕ್ಕಟ್ಟು ಉಲ್ಬಣವಾಗಲು ಈ ಘಟನೆ ಪ್ರಮುಖ ಕಾರಣ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಈ ವರೆಗೆ 42,000 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಹಿಜ್ಬುಲ್ಲಾ ಮತ್ತು ಇರಾನ್ ಬೆಂಬಲಿತ ಸಂಘಟನೆಗಳು ಕೈಜೋಡಿಸಿದ ಪರಿಣಾಮ ಇದು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿದೆ.